ಆರ್ಜೆ ಪ್ರದೀಪ ರಾಜ್ಯದ ಜನತೆಗೆ, ಅದರಲ್ಲೂ ಬೆಂಗಳೂರು ಜನರಿಗೆ ಸಾಕಷ್ಟು ಚಿರಪರಿಚಿತ. ಇನ್ನು ಅವರ ಪತ್ನಿ ಶ್ವೇತಾ ಪ್ರಸಾದ್ 'ರಾಧಾ ರಮಣ' ಧಾರಾವಾಹಿ ಮೂಲಕ ಮನೆ ಮಾತಾದ ನಟಿ.
ಇತ್ತೀಚೆಗೆ ಶ್ವೇತಾ ಪ್ರಸಾದ್ ತಾನು 'ರಾಧಾ ರಮಣ' ಧಾರಾವಾಹಿಯಿಂದ ಹೊರಬಂದಿರುವುದಾಗಿ ಹೇಳಿದ್ದರು. ಇದರಿಂದ ಶ್ವೇತಾ ಅಭಿಮಾನಿಗಳಿಗೆ ಬೇಸರ ಉಂಟಾಗಿದ್ದಂತೂ ನಿಜ. ಈ ಬೇಸರದ ನಡುವೆ ಅಭಿಮಾನಿಗಳಿಗೆ ವೆಬ್ಸೈಟ್ವೊಂದು ಶ್ವೇತಾ ಬಗ್ಗೆ ಸುಳ್ಳುಸುದ್ದಿ ಪ್ರಕಟಿಸಿ ಶಾಕ್ ನೀಡಿತ್ತು. ಶ್ವೇತಾ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬ ಸುದ್ದಿಯನ್ನು ಈ ವೆಬ್ಸೈಟ್ ಪ್ರಕಟಿಸಿದ್ದು ಇದನ್ನು ನೋಡಿದ ಶ್ವೇತಾ, ಪ್ರದೀಪ್ ಕುಟುಂಬದವರು ಹಾಗೂ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಈ ಸಂಬಂಧ ಪ್ರದೀಪ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಕೇವಲ ಲೈಕ್, ಕಮೆಂಟ್ ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಇಂತ ಕೆಟ್ಟ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. ಇಂತಹ ವೈಬ್ಸೈಟ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಸುದ್ದಿ ಪ್ರಕಟವಾದಾಗಿನಿಂದ ನಮಗೆ ಎಲ್ಲರೂ ಕಾಲ್ ಮಾಡಿ ವಿಚಾರಿಸುತ್ತಿದ್ದಾರೆ. ಶ್ವೇತಾ ಚೆನ್ನಾಗಿದ್ದಾರೆ, ನಾವು ಸಂತೋಷವಾಗಿದ್ದೇವೆ. ದಯವಿಟ್ಟು ಈ ರೀತಿಯ ಸುಳ್ಳುಸುದ್ದಿಗಳನ್ನು ಪ್ರಕಟಿಸಿ ತೊಂದರೆ ಕೊಡಬೇಡಿ ಎಂದು ಪ್ರದೀಪ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.