ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಘು ಚರಣ್ ನಿರ್ದೇಶನದ ಮಾಂಗಲ್ಯಂ ತಂತು ನಾನೇನಾ ಧಾರಾವಾಹಿ ಮುಕ್ತಾಯಗೊಳ್ಳುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇತ್ತೀಚೆಗಷ್ಟೇ ಯಶಸ್ವಿ 500 ಸಂಚಿಕೆಗಳನ್ನು ಪೂರೈಸಿದ್ದ ಮಾಂಗಲ್ಯಂ ತಂತು ನಾನೇನಾ ಧಾರಾವಾಹಿ ಟಿಆರ್ ಪಿ ಯಲ್ಲೂ ಮುಂದಿದೆ. ಸದ್ಯ ಈ ಧಾರಾವಾಹಿ ತಮಿಳು ಭಾಷೆಗೂ ಡಬ್ಬಿಂಗ್ ಆಗಿದ್ದು, ಆಶಾ ಕಲ್ಯಾಣಂ ಎಂಬ ಹೆಸರಿನಲ್ಲಿ ಪ್ರಸಾರ ಕಾಣುತ್ತಿದೆ.
ಭಾರತೀಯ ಸಂಸ್ಕೃತಿಯಲ್ಲಿ ಮಾಂಗಲ್ಯಕ್ಕೆ ವಿಶೇಷವಾದ ಸ್ಥಾನವಿರುವುದು ನಮಗೆಲ್ಲರಿಗೂ ತಿಳಿದೇ ಇದೆ. ಮಾಂಗಲ್ಯದ ಮಹತ್ವವನ್ನು ಸಾರುವ ಈ ಧಾರಾವಾಹಿ ವಿಭಿನ್ನ ಕಥಾ ಹಂದರದ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಮಾತ್ರವಲ್ಲ, ಶ್ರಾವಣಿ ಮತ್ತು ತೇಜಸ್ವಿಯರ ಮುದ್ದಾದ ಜೋಡಿಯನ್ನು ಕೂಡಾ ವೀಕ್ಷಕರು ಮೆಚ್ಚಿಕೊಂಡಿದ್ದರು.
ಅಂದ ಹಾಗೇ 'ಮಾಂಗಲ್ಯಂ ತಂತು ನಾನೇನಾ' ಧಾರಾವಾಹಿಯ ಕಥೆ ಉಳಿದ ಕಥೆಗಳಿಂತ ಕೊಂಚ ಭಿನ್ನ ಎಂದರೆ ತಪ್ಪಾಗಲಾರದು. ಮದುವೆಯ ಮೂಲಕ ಧಾರಾವಾಹಿ ಆರಂಭವಾದರೂ ನಾಯಕ ನಾಯಕಿಗೆ ಇದು ಬಯಸದೇ ಬಂದ ಭಾಗ್ಯ. ಶ್ರೀಮಂತ ಮನೆತನದ ತೇಜಸ್ ಆಕಸ್ಮಿಕವಾಗಿ ಮಧ್ಯಮ ವರ್ಗದ ಶ್ರಾವಣಿಯನ್ನು ಮದಿವೆಯಾಗಿದ್ದರೂ ಎರಡು ಮನೆಯವರು ಇದಕ್ಕೆ ವಿರುದ್ಧವಾಗಿದ್ದರು. ಮುಂದೆ ನಾಯಕನ ಮಡದಿಯಾಗಿ ಮನೆಗೆ ಬಂದ ನಾಯಕಿ ಯಾವ ರೀತಿಯಲ್ಲಿ ನಾಯಕನ ಮನಸ್ಸು ಗೆಲ್ಲುತ್ತಾಳೆ? ನಾಯಕನಲ್ಲಿ ಪ್ರೀತಿ ಮೂಡಿಸುವುದಾದರೂ ಹೇಗೆ, ಅವರಿಬ್ಬರೂ ಒಂದಾಗುವ ಪರಿ ಎಲ್ಲವನ್ನು ನಿರ್ದೇಶಕ ರಘುಚರಣ್ ಬಹಳ ಅಚ್ಚುಕಟ್ಟಾಗಿ ಹೆಣೆದಿದ್ದರು.
ಇಂತಿಪ್ಪ ಧಾರಾವಾಹಿ ಮುಗಿಯುತ್ತಿರುವುದು ಬೇಸರ ತಂದಿದೆ. ನಾಯಕಿ ಶ್ರಾವಣಿಯಾಗಿ ದಿವ್ಯಾ ಬಣ್ಣ ಹಚ್ಚಿದ್ದರೆ ನಾಯಕ ತೇಜಸ್ವಿ ಪಾತ್ರದಲ್ಲಿ ಚಂದನ್ ಅಭಿನಯಿಸಿದ್ದಾರೆ. ಉಳಿದಂತೆ ವೀಣಾ ಸುಂದರ್, ಹನುಮಂತೇಗೌಡ್ರು, ಸ್ಪಂದನಾ, ಸಂಗೀತಾ ಅನಿಲ್ ಮುಂತಾದವರು ತಾರಾಗಣದಲ್ಲಿದ್ದಾರೆ.