ಕೊರೊನಾ ವೈರಸ್ ಭೀತಿಯಿಂದಾಗಿ ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶಾದ್ಯಂತ ಸರಳವಾಗಿ ಆಚರಿಸಲಾಗುತ್ತದೆ. ಆದರೂ ಸೋಷಿಯಲ್ ಮೀಡಿಯಾದ್ಯಂತ 74ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಶುಭಾಶಯ ವಿನಿಮಯ ಮಾತ್ರ ಎಂದಿನಂತೆ ಜೋರಾಗಿದೆ.
ಪ್ರತಿಯೊಬ್ಬ ಭಾರತೀಯನಿಗೂ ನಮ್ಮ ದೇಶದ ಬಗ್ಗೆ ಹಿರಿಮೆ ಜೊತೆಗೆ ದೇಶಾಭಿಮಾನ ಇದೆ. ಕನ್ನಡದಲ್ಲಿ ಈಗಾಗಲೇ ದೇಶಾಭಿಮಾನದ ಬಗ್ಗೆ ಸಾಕಷ್ಟು ಹಾಡುಗಳು ಬಂದಿದೆ. ಇದೀಗ ಸ್ಯಾಂಡಲ್ವುಡ್ ತಾರೆಗಳಾದ ಶ್ರೀಮುರಳಿ, ರಮೇಶ್ ಅರವಿಂದ್, ಡಾಲಿ ಧನಂಜಯ್, ಸತೀಶ್ ನೀನಾಸಂ, ವಿಜಯರಾಘವೇಂದ್ರ, ನಿರ್ದೇಶಕ ಪ್ರೇಮ್, ನಟಿಯರಾದ ರಚಿತಾ ರಾಮ್ , ಭಾವನಾ ಮೆನನ್, ರಕ್ಷಿತಾ ಪ್ರೇಮ್ ಹಾಗೂ ಗಾಯಕರಾದ ಚಂದನ್ ಶೆಟ್ಟಿ, ಅಲೋಕ್ 74ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾ ಹೆಮ್ಮೆಯಿಂದ 'ಇದೇ ನಮ್ಮ ಭಾರತ' ಎನ್ನುತ್ತಿದ್ದಾರೆ.
ಇವರೆಲ್ಲರೂ ಕೈಯಲ್ಲಿ ಬಾವುಟ ಹಿಡಿದು 'ಶತಮಾನದ ಶಕ್ತಿ ಇದು, ಇದೇ ನಮ್ಮ ಭವ್ಯ ಭಾರತ...' ಎಂದು ಹಾಡುತ್ತಿದ್ದಾರೆ. ಈಗಾಗಲೇ ಹಲವು ರಿಯಾಲಿಟಿ ಶೋಗಳನ್ನು ಮಾಡಿರುವ ವರುಣ್ ಸ್ಟುಡಿಯೋ , ಸ್ವಾತಂತ್ರ್ಯ ದಿನದ ಅಂಗವಾಗಿ ಈ ವಿಶೇಷ ಹಾಡನ್ನು ತಯಾರಿಸಿದ್ದಾರೆ.
ಈ ವಿಶೇಷ ಹಾಡನ್ನು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡ ಚಿತ್ರರಂಗದ ನೃತ್ಯ ನಿರ್ದೇಶಕ ಭಜರಂಗಿ ಮೋಹನ್, ಈ ಹಾಡನ್ನು ಬರೆದಿದ್ದು, ಅನಿರುದ್ಧ್ ಶಾಸ್ತ್ರಿ ಸುಮಧುರ ಕಂಠದಿಂದ ಹಾಡುಗಳನ್ನು ಹಾಡಿದ್ದಾರೆ. ಈ ಹಾಡಿಗೆ ಅದ್ವೀಕ್ ಸಂಗೀತ ನೀಡಿದ್ದಾರೆ. ವರುಣ್ ಕುಮಾರ್ ಗೌಡ ಹಾಗೂ ತಂಡ ಈ ವಿಶೇಷ ಹಾಡನ್ನು ಸ್ವಾತಂತ್ರ್ಯ ದಿನಕ್ಕಾಗಿ ಚಿತ್ರೀಕರಣ ಮಾಡಿದ್ದಾರೆ. ಸದ್ಯಕ್ಕೆ 'ಇದೇ ನಮ್ಮ ಭಾರತ ಹಾಡು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.