ಬೆಂಗಳೂರು : ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಧೃವ ಪಾತ್ರಕ್ಕೆ ಜೀವ ತುಂಬಿದ ಈತ ಮಂಡ್ಯದ ಮುದ್ದಾದ ಹುಡುಗ. ಕಿರುತೆರೆ ಲೋಕದಲ್ಲಿ ಧೃವತಾರೆಯಂತೆ ಮಿನುಗುತ್ತಿರುವ ರಂಜನ್ ಹುಟ್ಟಿ ಬೆಳೆದಿದ್ದೆಲ್ಲಾ ಸಕ್ಕರೆ ನಾಡು ಮಂಡ್ಯದಲ್ಲಿ.
ಬಾಲ್ಯದಿಂದಲೂ ರಂಜನ್ಗೆ ಇದ್ದುದು ಒಂದೇ ಕನಸು! ತಾನು ನಟನಾಗಬೇಕು. ನಟನಾ ರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂಬುದೇ ಅವರಿಗಿದ್ದ ಕನಸು. ವಿದ್ಯಾಭ್ಯಾಸ ಮುಗಿದ ಬಳಿಕ ನಟನಾಗುವ ಉದ್ದೇಶದಿಂದ ಮಂಡ್ಯದಿಂದ ಬೆಂಗಳೂರಿಗೆ ಬಂದ ರಂಜನ್ ಸೀದಾ ಸೇರಿದ್ದು, ನಾಗಾಭರಣ ಅಭಿನಯ ತರಗತಿ ಶಾಲೆಗೆ. ಅಲ್ಲಿ ಚೆನ್ನಾಗಿ ಪಳಗಿದ ರಂಜನ್ ನಟನೆಯ ರೀತಿ ರಿವಾಜು ತಿಳಿದಿರುವ ಹುಡುಗ. ಮುಂದೆ ಒಂದಷ್ಟು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ರಂಜನ್ ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ಬಣ್ಣ ಹಚ್ಚಿದ್ದಾನೆ.
ಅಷ್ಟರಲ್ಲಿ ಅದೃಷ್ಟ ದೇವತೆ ರಂಜನ್ ಕೈ ಹಿಡಿದೇ ಬಿಟ್ಟಳು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಇಷ್ಟದೇವತೆ ಧಾರಾವಾಹಿಯಲ್ಲಿ ವಸಿಷ್ಠ ಎಂಬ ವಿಲನ್ ರೋಲ್ ಮಾಡಿ ಸೈ ಎನ್ನಿಸಿಕೊಂಡಿದ್ದರು. ತದ ನಂತರ ಗಟ್ಟಿಮೇಳದ ಧೃವ ಆಗಿ ಬದಲಾದ ರಂಜನ್ಗೆ ದೊಡ್ಡ ಯಶಸ್ಸು ಸಿಕ್ಕಿದೆ. ಇಂದು ರಂಜನ್ ಎಲ್ಲೇ ಹೋದರೂ ಜನ ಅವರನ್ನು ಧೃವ ಎಂದು ಗುರುತಿಸುವಂತಾಗಿದೆ. ನಿಜಕ್ಕೂ ತುಂಬಾನೇ ಸಂತಸವಾಗುತ್ತಿದೆ ಎನ್ನುವ ರಂಜನ್ ಸಿನಿಮಾದಿಂದಲೂ ಅವಕಾಶಗಳು ಬರುತ್ತಿವೆಯಂತೆ.