'ಪುಷ್ಪಕ ವಿಮಾನ' ಸಿನಿಮಾದ ನಿರ್ಮಾಪಕ ವಿಖ್ಯಾತ್ ರಂಗನಾಯಕ ಚಿತ್ರವನ್ನು ನಿರ್ಮಿಸಲು ಮಾತುಕತೆ ಮಾಡಿ ಒಂದು ಟೀಸರ್ ಕೂಡ ರಿವೀಲ್ ಮಾಡಲಾಗಿತ್ತು. ಇನ್ನೇನು ಸಿನಿಮಾ ಶುರು ಆಗಬೇಕು ಅನ್ನುವಷ್ಟರಲ್ಲಿ , ಜಗ್ಗೇಶ್ ಮತ್ತು ವಿಖ್ಯಾತ್ ಇಬ್ಬರೂ ಮಾತನಾಡುವ ಸಂದರ್ಭದಲ್ಲಿ ಜಗ್ಗೇಶ್ ದರ್ಶನ್ ಅಭಿಮಾನಿಗಳಿಗೆ ವಿವಾದಿತ ಹೇಳಿಕೆ ನೀಡಿದ್ದರು ಎಂದು ಹೇಳಲಾದ ಆಡಿಯೋ ಕ್ಲಿಪ್ಪಿಂಗ್ ವೈರಲ್ ಆಗಿದೆ. ಇದು ದರ್ಶನ್ ಮತ್ತವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.
ಈ ಹೇಳಿಕೆಯಿಂದ ರೊಚ್ಚಿಗೆದ್ದ ದರ್ಶನ್ ಅಭಿಮಾನಿಗಳು ಜಗ್ಗೇಶ್ಗೆ ಮುತ್ತಿಗೆ ಹಾಕುವ ಘಟನೆ ನಡೆದು, ಸ್ವತಃ ಜಗ್ಗೇಶ್ ಅಸಮಾಧಾನಗೊಂಡಿದ್ದರು. ಇದಕ್ಕೆಲ್ಲ ಕಾರಣ ವಿಖ್ಯಾತ್ ಅನ್ನೋದು ಜಗ್ಗೇಶ್ಗೆ ಗೊತ್ತಾಗಿತ್ತು. ಇಷ್ಟೆಲ್ಲಾ ರಾದ್ಧಾಂತ ಆದ್ಮೇಲೆ ರಂಗನಾಯಕ ಸಿನಿಮಾ ಪ್ರಾರಂಭವಾಗೋದೇ ಡೌಟ್ ಅಂತ ಗಾಂಧಿನಗರದಲ್ಲಿ ಹೇಳುತ್ತಿದ್ದರು.
ಇದೀಗ ನಿರ್ದೇಶಕ ಗುರು ಪ್ರಸಾದ್, ನಾನು ಹತ್ತು ವರ್ಷದಿಂದ ಈ ಸಿನಿಮಾ ಮೇಲೆ ವರ್ಕ್ ಮಾಡಿದ್ದೀನಿ. ರಂಗನಾಯಕ ಸಿನಿಮಾ ಶುರು ಆಗುತ್ತೆ ಎಂದಿದ್ದಾರೆ. ಇನ್ನೊಂದು ವಿಚಾರ ಅಂದರೆ, ಈ ಸಿನಿಮಾವನ್ನು ವಿಖ್ಯಾತ್ ಅವರೇ ನಿರ್ಮಾಣ ಮಾಡ್ತಾರಂತೆ.
ಸದ್ಯ ಜಗ್ಗೇಶ್ ಮತ್ತು ನಿರ್ಮಾಪಕ ವಿಖ್ಯಾತ್ ನಡುವಿನ ಮನಸ್ತಾಪ ತಣ್ಣಗಾಗಿದೆ. ಇಬ್ಬರೂ ಮೊದಲಿನಂತೆ ಸ್ನೇಹದಿಂದಿದ್ದಾರೆ. ಈಗಾಗಲೇ ಇಬ್ಬರ ಜೊತೆ ಮಾತನಾಡಿದ್ದೇನೆ. ಅಷ್ಟೇ ಅಲ್ಲ, ರಂಗ ನಾಯಕ ಸಿನಿಮಾಕ್ಕಾಗಿ ಅದ್ದೂರಿಯಾಗಿ ಸೆಟ್ ಕೂಡಾ ಹಾಕಿದ್ದೀವಿ ಎಂದು ಗುರು ಪ್ರಸಾದ್ ಹೇಳಿದರು.
ಗುರುಪ್ರಸಾದ್ ಒಂದು ಸಿನಿಮಾ ಮಾಡೋದಿಕ್ಕೆ ಮೂರು ವರ್ಷ ತೆಗೆದುಕೊಳ್ಳುತ್ತಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ನಾನು ನನ್ನ ಸ್ನೇಹಿತ ರವೀಶ್ ಜೊತೆ ಸೇರಿಕೊಂಡು ಕೊರೊನಾ ಸಮಯದಲ್ಲಿ ಒಂದು ಸಿನಿಮಾ ಮಾಡಿದ್ದೀವಿ. ಸದ್ಯದಲ್ಲೇ ಈ ಸಿನಿಮಾದ ಟೈಟಲ್ ಏನು ಅನ್ನೋದನ್ನು ತಿಳಿಸ್ತೀವಿ ಎಂದರು.