ಗೋಪಿ ಪುತ್ರನ್ ನಿರ್ದೇಶನದಲ್ಲಿ ರಾಣಿ ಮುಖರ್ಜಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ 'ಮರ್ದಾನಿ -2' ಸಿನಿಮಾ ನಾಳೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ರಾಣಿ ಮುಖರ್ಜಿ ಈ ಸಿನಿಮಾದಲ್ಲಿ ಶಿವಾನಿ ಶಿವಾಜಿ ರಾಯ್ ಎಂಬ ಐಪಿಎಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ.
ಇಂದು ಬೆಳಗ್ಗೆ ಮುಂಬೈನಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳಿಗಾಗಿ 'ಮರ್ದಾನಿ -2' ಚಿತ್ರತಂಡ ವಿಶೇಷ ಪ್ರದರ್ಶನ ಏರ್ಪಡಿಸಿತ್ತು. ಈ ಪ್ರದರ್ಶನದಲ್ಲಿ ಸುಮಾರು 100ಕ್ಕೂ ಹೆಚ್ಚು ಐಪಿಎಸ್ ಅಧಿಕಾರಿಗಳು ಭಾಗವಹಿಸಿ ಸಿನಿಮಾ ವೀಕ್ಷಿಸಿದರು. ನಂತರ ಮಾತನಾಡಿದ ಮಹಿಳಾ ಪೊಲೀಸ್ ಅಧಿಕಾರಿಗಳು, ಸಿನಿಮಾದಲ್ಲಿ ರಾಣಿ ಮುಖರ್ಜಿಯ ಪಾತ್ರವನ್ನು ಬಹಳ ಹೊಗಳಿದರು, ಅಲ್ಲದೆ ಸಿನಿಮಾದಲ್ಲಿ ಶಿವಾನಿ ಪಾತ್ರಧಾರಿ ಕಾರ್ಯ ನಿರ್ವಹಿಸಿದಂತೆ ನಿಜ ಜೀವನದಲ್ಲೂ ಎಲ್ಲಾ ಪೊಲೀಸ್ ಅಧಿಕಾರಿಗಳು ಕಾರ್ಯ ನಿರ್ವಹಿಸಿದರೆ ದೇಶದಲ್ಲಿ ಅಪರಾಧಗಳನ್ನು ಹಂತಹಂತವಾಗಿ ತಡೆಗಟ್ಟಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ರಾಣಿ ಮುಖರ್ಜಿ ಕೂಡಾ ಅಧಿಕಾರಿಗಳೊಂದಿಗೆ ಕುಳಿತು ಸಿನಿಮಾ ವೀಕ್ಷಿಸಿದರು.
ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾ ತಯಾರಿಸಲಾಗಿದೆ. 'ಮರ್ದಾನಿ' ಚಿತ್ರದಲ್ಲಿ ಮಕ್ಕಳ ಅಪಹರಣ ಹಾಗೂ ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ಕಥೆ ಹೆಣೆಯಲಾಗಿತ್ತು. ಭಾಗ -2ರಲ್ಲಿ ಹೆಣ್ಣುಮಕ್ಕಳ ಅಪಹರಣ ಹಾಗೂ ಅತ್ಯಾಚಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ತೋರಿಸಲಾಗಿದ್ದು, ಇದರ ಹಿಂದಿರುವ ಕಿಂಗ್ಪಿನ್ ಹಿಡಿಯಲು ಐಪಿಎಸ್ ಶಿವಾನಿ ಹೇಗೆ ಪಣ ತೊಡುತ್ತಾಳೆ ..? ಆತನನ್ನು ಹಿಡಿಯಲು ಆಕೆ ಹೂಡುವ ತಂತ್ರಗಳೇನು..? ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಯಶ್ ರಾಜ್ ಫಿಲಮ್ಸ್ ಬ್ಯಾನರ್ ಅಡಿ ಆದಿತ್ಯ ಚೋಪ್ರಾ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ರಾಣಿ ಮುಖರ್ಜಿ, ವಿಶಾಲ್ ಜೆತ್ವ, ವಿಕ್ರಮ್ ಸಿಂಗ್ ಚೌಹಾಣ್ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.