ನವದೆಹಲಿ: ಚಾಟ್ಗಳನ್ನು ಲಾಕ್ ಮಾಡಬಹುದಾದ ಸೀಕ್ರೆಟ್ ಕೋಡ್ ವೈಶಿಷ್ಟ್ಯವನ್ನು ವಾಟ್ಸ್‌ಆ್ಯಪ್ ಪರಿಚಯಿಸಿದೆ. ಬೇರೆಯವರು ನೋಡಬಾರದಂಥ ಸೂಕ್ಷ್ಮ ಚಾಟ್ಗಳನ್ನು ಗುಪ್ತವಾಗಿ ಇಡಲು ಬಳಕೆದಾರರಿಗೆ ಈ ವೈಶಿಷ್ಟ್ಯ ಸಹಾಯ ಮಾಡುತ್ತದೆ. ಅಂದರೆ ಈಗ ನಿಮ್ಮ ಫೋನ್ಗಳಿಗೆ ಹಾಕಿರುವ ಪಾಸ್ವರ್ಡ್ ಹೊರತುಪಡಿಸಿ ವಾಟ್ಸ್ಆ್ಯಪ್ಗಾಗಿಯೇ ನೀವು ಪ್ರತ್ಯೇಕ ಪಾಸ್ವರ್ಡ್ ಇಟ್ಟುಕೊಳ್ಳಬಹುದು.
"ವಾಟ್ಸ್‌ಆ್ಯಪ್ ಚಾಟ್ಗಳನ್ನು ಲಾಕ್ ಮಾಡಲು ರಹಸ್ಯ ಕೋಡ್ ಜಾರಿ ಮಾಡಿದ್ದೇವೆ. ಇದರಿಂದ ನೀವು ನಿಮ್ಮ ಚಾಟ್ಗಳನ್ನು ವಿಶಿಷ್ಟ ಪಾಸ್ವರ್ಡ್ನಿಂದ ರಕ್ಷಿಸಬಹುದು. ಈಗ ನೀವು ಸರ್ಚ್ ಬಾರ್ನಲ್ಲಿ ರಹಸ್ಯ ಕೋಡ್ ಅನ್ನು ಟೈಪ್ ಮಾಡಿದಾಗ ಮಾತ್ರ ನಿಮ್ಮ ಲಾಕ್ ಮಾಡಿದ ಚಾಟ್ಗಳು ಕಾಣಿಸುತ್ತವೆ. ಹೀಗಾಗಿ ನಿಮ್ಮ ಅತ್ಯಂತ ಖಾಸಗಿ ಸಂಭಾಷಣೆಗಳನ್ನು ದುರುದ್ದೇಶದಿಂದ ಯಾರೂ ನೋಡಲು ಸಾಧ್ಯವಿಲ್ಲ" ಎಂದು ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್ಬರ್ಗ್ ತಮ್ಮ ವಾಟ್ಸ್‌ಆ್ಯಪ್ ಚಾನೆಲ್ನಲ್ಲಿ ಹೇಳಿದ್ದಾರೆ.
ಲಾಕ್ ಮಾಡಿದ ಚಾಟ್ ಫೋಲ್ಡರ್ ಅನ್ನು ನಿಮ್ಮ ಚಾಟ್ ಲಿಸ್ಟ್ ನಿಂದ ಹೈಡ್ ಮಾಡಬಹುದು. ಹೀಗಾಗಿ ಅವುಗಳನ್ನು ಸರ್ಚ್ಬಾರ್ ನಲ್ಲಿ ನಿಮ್ಮ ರಹಸ್ಯ ಕೋಡ್ ಅನ್ನು ಟೈಪ್ ಮಾಡುವ ಮೂಲಕ ಮಾತ್ರ ನೋಡಬಹುದು. "ಒಂದೊಮ್ಮೆ ಆ ಚಾಟ್ಗಳು ಸಹ ಕಾಣಿಸುವಂತೆ ಮಾಡಬೇಕೆನಿಸಿದರೆ ಆ ರೀತಿ ಕೂಡ ಸೆಟಿಂಗ್ ಮಾಡಬಹುದು. ನೀವು ಯಾವುದಾದರೂ ಹೊಸ ಚಾಟ್ ಒಂದನ್ನು ಲಾಕ್ ಮಾಡಲು ಬಯಸಿದಲ್ಲಿ ಸೆಟಿಂಗ್ಗೆ ಹೋಗುವ ಬದಲು ಲಾಂಗ್ ಪ್ರೆಸ್ ಮೂಲಕವೂ ನೇರವಾಗಿ ಲಾಕ್ ಮಾಡಬಹುದು" ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ನಿಮ್ಮ ಫೋನ್ ಅನ್ನು ಬೇರೆಯವರು ಚೆಕ್ ಮಾಡುತ್ತಿದ್ದರೆ ಅಥವಾ ಅವರು ನಿಮ್ಮ ಫೋನ್ ಬಳಸುತ್ತಿದ್ದರೂ ಕೂಡ ಅವರಿಗೆ ನಿಮ್ಮ ಸೀಕ್ರೇಟ್ ಚಾಟ್ಗಳು ಕಾಣಿಸುವುದಿಲ್ಲ. ಈ ವರ್ಷದ ಆರಂಭದಲ್ಲಿ ಚಾಟ್ಗಳನ್ನು ಲಾಕ್ ಮಾಡಲು ವಾಟ್ಸ್‌ಆ್ಯಪ್ ಚಾಟ್ ಲಾಕ್ ವೈಶಿಷ್ಟ್ಯ ಹೊರತಂದಿತ್ತು. ಈಗ ಮತ್ತೊಂದು ಹಂತದ ಸುರಕ್ಷತೆಗಾಗಿ ಸೀಕ್ರೇಟ್ ಕೋಡ್ ವೈಶಿಷ್ಟ್ಯ ನೀಡಲಾಗಿದೆ.
"ವಾಟ್ಸ್‌ಆ್ಯಪ್ ಬಳಕೆದಾರರಿಗೆ ಚಾಟ್ ಲಾಕ್ ಇಷ್ಟವಾಗಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ ಮತ್ತು ರಹಸ್ಯ ಕೋಡ್ ಅದನ್ನು ಅವರಿಗೆ ಇನ್ನಷ್ಟು ಉಪಯುಕ್ತವಾಗಿಸುತ್ತದೆ ಎಂದು ಭಾವಿಸುತ್ತೇವೆ. ಸೀಕ್ರೆಟ್ ಕೋಡ್ ಇಂದಿನಿಂದ ಜಾರಿಯಾಗುತ್ತದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಜಾಗತಿಕವಾಗಿ ಲಭ್ಯವಾಗಲಿದೆ" ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: ಗೂಗಲ್ ಫೋಟೋಸ್ನಿಂದ GIF ಆ್ಯನಿಮೇಶನ್ ರಚಿಸುವುದು ಹೇಗೆ? ಇಲ್ಲಿದೆ ಗೈಡ್