ETV Bharat / science-and-technology

ಬ್ರೌಸರ್​ನೊಳಗೆ ChatGPT ಅಳವಡಿಸಲಿದೆ ಒಪೇರಾ - ಒಪೇರಾ ತನ್ನ ಉತ್ಪನ್ನಗಳಿಗೆ ಚಾಟ್‌ಜಿಪಿಟಿ

ಒಪೇರಾ ಬ್ರೌಸರ್ ತನ್ನ ಬ್ರೌಸರ್ ಒಳಗಡೆಯೇ ಚಾಟ್​ ಜಿಪಿಟಿಯನ್ನು ಅಳವಡಿಸುವುದಾಗಿ ಘೋಷಿಸಿದೆ. ಒಪೇರಾ ಜಗತ್ತಿನಲ್ಲಿ ಗೇಮಿಂಗ್​ಗಾಗಿ ಅತಿ ಹೆಚ್ಚು ಬಳಸುವ ಬ್ರೌಸರ್ ಆಗಿದೆ.

ಬ್ರೌಸರ್​ನೊಳಗೆ ChatGPT ಅಳವಡಿಸಲಿದೆ ಒಪೇರಾ ಬ್ರೌಸರ್
Web browser Opera is planning to incorporate ChatGPT
author img

By

Published : Feb 10, 2023, 1:47 PM IST

ಬೀಜಿಂಗ್: ಪ್ರಖ್ಯಾತ ವೆಬ್ ಬ್ರೌಸರ್ ಒಪೇರಾ ತನ್ನ ಉತ್ಪನ್ನಗಳಿಗೆ ಚಾಟ್‌ಜಿಪಿಟಿಯನ್ನು ಸಂಯೋಜಿಸಲು ಯೋಜಿಸುತ್ತಿದೆ ಎಂದು ಒಪೇರಾದ ಒಡೆತನ ಹೊಂದಿರುವ ಕಂಪನಿ ಕುನ್ಲುನ್ ಟೆಕ್ ಬುಧವಾರ ಪ್ರಕಟಿಸಿದೆ. ಇದು ಯಾವಾಗಿನಿಂದ ಜಾರಿಗೆ ಬರಲಿದೆ ಎಂಬ ಬಗ್ಗೆ ಯಾವುದೇ ವಿವರಗಳನ್ನು ಹಂಚಿಕೊಳ್ಳಲಾಗಿಲ್ಲ ಅಥವಾ ಎಲ್ಲಾ Opera ಉತ್ಪನ್ನಗಳಲ್ಲಿ ಚಾಟ್‌ಜಿಪಿಟಿ ಸಂಯೋಜಿತವಾಗಲಿದೆಯಾ ಎಂಬುದು ತಿಳಿದಿಲ್ಲ. ಒಪೇರಾ iOS ಮತ್ತು Android ಗಾಗಿ ಡೆಸ್ಕ್‌ಟಾಪ್ ಮತ್ತು ಮೊಬೈಲ್ ಬ್ರೌಸರ್‌ಗಳನ್ನು ಹೊಂದಿದೆ.

ಕೃತಕ ಬುದ್ಧಿಮತ್ತೆ ಚಾಟ್‌ಬಾಟ್ ತಂತ್ರಜ್ಞಾನವನ್ನು ತಮ್ಮದೇ ಆದ ಸರ್ಚ್ ಇಂಜಿನ್‌ಗಳೊಂದಿಗೆ ಸಂಯೋಜಿಸುವ ಯೋಜನೆಗಳನ್ನು ಮೈಕ್ರೋಸಾಫ್ಟ್ ಮತ್ತು ಗೂಗಲ್ ಘೋಷಿಸಿದ ನಂತರ ಒಪೇರಾದಿಂದ ಈ ಮಾಹಿತಿ ಬಂದಿದೆ. ಮೈಕ್ರೋಸಾಫ್ಟ್ ಬೆಂಬಲಿತ OpenAI ಅಭಿವೃದ್ಧಿಪಡಿಸಿದ ChatGPT, ನವೆಂಬರ್ ಅಂತ್ಯದಲ್ಲಿ ಬಿಡುಗಡೆಯಾದಾಗಿನಿಂದ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ.

ಜನವರಿಯ ಸ್ಟ್ಯಾಟ್‌ಕೌಂಟರ್ ಡೇಟಾ ಪ್ರಕಾರ, ಗೂಗಲ್‌ನ ಕ್ರೋಮ್ ಬ್ರೌಸರ್ ವಿಶ್ವಾದ್ಯಂತ ಶೇ 65.4 ಜನ ಬಳಸುವ ಬ್ರೌಸರ್ ಆಗಿದ್ದು, ಅತಿದೊಡ್ಡ ಮಾರುಕಟ್ಟೆ ಪಾಲನ್ನು ಹೊಂದಿದೆ. ಮೈಕ್ರೋಸಾಫ್ಟ್‌ನ ಎಡ್ಜ್ ಬ್ರೌಸರ್ ಶೇ 4.5 ರಷ್ಟು ಪಾಲನ್ನು ಹೊಂದಿದೆ. ಒಪೇರಾ ವಿಶ್ವಾದ್ಯಂತ ಬ್ರೌಸರ್ ಮಾರುಕಟ್ಟೆಯಲ್ಲಿ ಶೇ 2.4 ರಷ್ಟು ಪಾಲು ಹೊಂದಿದ್ದು, ಆರನೇ ಸ್ಥಾನದಲ್ಲಿದೆ ಎಂದು ಡೇಟಾ ತೋರಿಸಿದೆ.

ಗೇಮಿಂಗ್‌ಗಾಗಿ ವಿಶೇಷವಾದ ಬ್ರೌಸರ್ ಅನ್ನು ಸಹ ನಿರ್ವಹಿಸುವ ನಾರ್ವೆ ಮೂಲದ ಒಪೇರಾ, ಮೂರನೇ ತ್ರೈಮಾಸಿಕದಲ್ಲಿ ಸರಾಸರಿ 321 ಮಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಗೇಮಿಂಗ್ ಬ್ರೌಸರ್ ವ್ಯವಹಾರದಿಂದ ಮೂರನೇ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ ಹೆಚ್ಚಳವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ವರ್ಷದಿಂದ ವರ್ಷಕ್ಕೆ ಶೇ 28 ರಷ್ಟು ಬೆಳವಣಿಗೆಯಾಗಿ 85.3 ಮಿಲಿಯನ್‌ ಡಾಲರ್​ಗೆ ತಲುಪಿದೆ.

ಒಪೇರಾ ಒಡೆತನ ಹೊಂದಿರುವ ಕಂಪನಿ ಕುನ್ಲುನ್ ಟೆಕ್ ಪ್ರಧಾನ ಕಚೇರಿ ಬೀಜಿಂಗ್​​ನಲ್ಲಿದ್ದು, ಕಂಪನಿಯು ಶೆನ್​ಜೆನ್ ಸ್ಟಾಕ್ ಎಕ್ಸಚೇಂಜ್​​ನಲ್ಲಿ ಲಿಸ್ಟ್ ಆಗಿದೆ. ಡಿಸೆಂಬರ್‌ನಲ್ಲಿ ಕಂಪನಿಯು ಸಂಗೀತ ಮತ್ತು ಚಿತ್ರಗಳಂತಹ ಕೃತಕ ಬುದ್ಧಿಮತ್ತೆ-ಉತ್ಪಾದಿತ ವಿಷಯಗಳನ್ನು ಆಧರಿಸಿದ ಉತ್ಪನ್ನಗಳತ್ತ ಗಮನಹರಿಸುವುದಾಗಿ ಹೇಳಿತ್ತು ಮತ್ತು ಈ ಉತ್ಪನ್ನಗಳನ್ನು ಓಪನ್ ಎಐ ಆಗಿ ಇರಿಸಲಾಗುವುದು ಎಂದಿತ್ತು. ಅನೇಕ ಕಂಪನಿಗಳು ಈಗಾಗಲೇ ಚಾಟ್‌ಜಿಪಿಟಿಯಂತಹ ಉತ್ಪನ್ನಗಳ ಮೇಲೆ ಕೆಲಸ ಆರಂಭಿಸಿವೆ. ಚೈನೀಸ್ ಟೆಕ್ ದೈತ್ಯ ಬೈದು ಮಾರ್ಚ್‌ನಲ್ಲಿ ತನ್ನದೇ ಆದ ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ನ ಆಂತರಿಕ ಪರೀಕ್ಷೆಯನ್ನು ಪೂರ್ಣಗೊಳಿಸುವ ಸಾಧ್ಯತೆಯಿದೆ ಎಂದು ಈ ವಾರ ಹೇಳಿದೆ.

ಅಲಿಬಾಬಾ ಕೂಡ ChatGPTಯ ಪ್ರತಿಸ್ಪರ್ಧಿ AI ಸಾಪ್ಟವೇರ್ ಒಂದನ್ನು ತಯಾರಿಸುತ್ತಿದೆ ಎನ್ನಲಾಗಿದೆ. ಆದರೆ ಇದರ ಬಿಡುಗಡೆಯ ದಿನಾಂಕವನ್ನು ಕಂಪನಿ ಬಹಿರಂಗಪಡಿಸಿಲ್ಲ. ಈ ಹೊಸ AI ವೈಶಿಷ್ಟ್ಯಗಳು ChatGPT ಯ ಸಾಮರ್ಥ್ಯಗಳೊಂದಿಗೆ ಹೇಗೆ ಹೋಲಿಕೆಯಾಗುತ್ತವೆ ಎಂಬುದು ಸ್ಪಷ್ಟವಾಗಿಲ್ಲ. ಮೊಬೈಲ್ ಸರ್ಚ್ ಎಂಜಿನ್ ಬಗ್ಗೆ ನೋಡುವುದಾದರೆ ಗೂಗಲ್ ಜಾಗತಿಕ ಮಾರುಕಟ್ಟೆಯಲ್ಲಿ ಶೇ 96.5 ರಷ್ಟು ಪಾಲನ್ನು ಹೊಂದಿದೆ. ಸ್ಟಾಟ್‌ಕೌಂಟರ್ ಪ್ರಕಾರ ಬೈದು ಶೇಕಡಾ 0.7 ರಷ್ಟು ಪಾಲನ್ನು ಹೊಂದಿದ್ದು ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ChatGPTಗೆ ಪ್ರತಿಸ್ಪರ್ಧಿಯಾಗಲಿದೆಯೇ ಗೂಗಲ್​ Apprentice Bard? ಫೆ.8 ರಂದು ಘೋಷಣೆ ಸಾಧ್ಯತೆ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.