ಸ್ಯಾನ್ ಫ್ರಾನ್ಸಿಸ್ಕೋ(ಯುಎಸ್): ಕೃತಕ ಬುದ್ಧಿಮತ್ತೆ (ಎಐ) ಸಾಫ್ಟ್ವೇರ್ ತಯಾರಿಸಿದ ಕಲಾಕೃತಿಗೆ ಕೃತಿಸ್ವಾಮ್ಯ (ಕಾಪಿರೈಟ್) ನೀಡಲು ಸಾಧ್ಯವಿಲ್ಲ ಎಂದು ಯುಎಸ್ ಫೆಡರಲ್ ನ್ಯಾಯಾಲಯ ಹೇಳಿದೆ. ಪೇಟೆಂಟ್ ಮತ್ತು ಟ್ರೇಡ್ ಮಾರ್ಕ್ ಕಚೇರಿ ಈ ಹಿಂದೆ ನೀಡಿದ್ದ ತೀರ್ಪನ್ನು ಈ ಮೂಲಕ ಫೆಡರಲ್ ನ್ಯಾಯಾಧೀಶರು ಎತ್ತಿಹಿಡಿದಿದ್ದಾರೆ. ಯಾವುದೇ ಮಾನವ ಹಸ್ತಕ್ಷೇಪವಿಲ್ಲದೇ ತಂತ್ರಜ್ಞಾನವೊಂದು ತಯಾರಿಸಿದ ಕಂಟೆಂಟ್ಗಳಿಗೆ ಕೃತಿಸ್ವಾಮ್ಯ ನೀಡುವ ಮಟ್ಟಿಗೆ ಈ ಕಾನೂನಿನ ವ್ಯಾಪ್ತಿ ಇಲ್ಲ ಎಂದು ಅಮೆರಿಕದ ಜಿಲ್ಲಾ ನ್ಯಾಯಾಧೀಶ ಬೆರಿಲ್ ಹೋವೆಲ್ ಹೇಳಿದ್ದಾರೆ.
ಎಐ ತಯಾರಿಸಿದ ಕೃತಿಗಳನ್ನು ನೋಂದಾಯಿಸಲು ನಿರಾಕರಿಸಿದ ಸರ್ಕಾರದ ನಿಲುವನ್ನು ಪ್ರಶ್ನಿಸಿ ಕಂಪ್ಯೂಟರ್ ವಿಜ್ಞಾನಿ ಸ್ಟೀಫನ್ ಥೇಲರ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಈ ಮಹತ್ವದ ತೀರ್ಪು ನೀಡಿದೆ. ಥೇಲರ್ ತಾವೇ ರಚಿಸಿದ ಕ್ರಿಯೇಟಿವಿಟಿ ಮೆಷಿನ್ ಅಲ್ಗಾರಿದಮ್ನಿಂದ ಸೃಷ್ಟಿಸಿದ ಎಐ ಚಿತ್ರಕ್ಕೆ ಕೃತಿಸ್ವಾಮ್ಯ ನೀಡುವಂತೆ ಕೋರಿದ್ದರು. ಆದರೆ, ಅಮೆರಿಕದ ಕೃತಿಸ್ವಾಮ್ಯ ಕಚೇರಿಯು ಥೇಲರ್ ಮನವಿಯನ್ನು ತಿರಸ್ಕರಿಸಿತ್ತು. ಕ್ರಿಯೇಟಿವಿಟಿ ಮಶೀನ್ ತಯಾರಿಸಿದ ಕೃತಿಯ ಮೇಲೆ ಅದರ ಮಾಲೀಕನಿಗೆ ಕೃತಿಸ್ವಾಮ್ಯ ನೀಡಬೇಕೆಂದು ಥೇಲರ್ ಹಲವಾರು ಬಾರಿ ಪ್ರಯತ್ನಿಸಿದ್ದರು.
ಥೇಲರ್ ಯುಎಸ್ ಕೃತಿಸ್ವಾಮ್ಯ ಕಚೇರಿಯ ವಿರುದ್ಧವೂ ಮೊಕದ್ದಮೆ ಹೂಡಿದ್ದರು. ಕೃತಿಸ್ವಾಮ್ಯ ಕಚೇರಿಯ ಕಾರ್ಯವೈಖರಿಯು ನಿರಂಕುಶ, ದುರುದ್ದೇಶಪೂರಿತವಾಗಿದ್ದು, ಅದು ಕಾನೂನಿಗೆ ಅನುಗುಣವಾಗಿ ಕೆಲಸ ಮಾಡುತ್ತಿಲ್ಲ ಎಮದು ಥೇಲರ್ ಆರೋಪಿಸಿದ್ದರು. ಮಾನವರಿಂದ ರಚನೆಯಾಗಿರುವುದು ಕೃತಿಸ್ವಾಮ್ಯದ ಮೂಲಭೂತ ಅವಶ್ಯಕತೆಯಾಗಿದೆ ಎಂದು ನ್ಯಾಯಾಧೀಶ ಹೋವೆಲ್ ತೀರ್ಪು ನೀಡಿರುವುದು ಗಮನಾರ್ಹ.
ಮೇಲ್ಮನವಿ ಸಲ್ಲಿಸಲು ನಿರ್ಧಾರ; ವರದಿಯ ಪ್ರಕಾರ, ಥೇಲರ್ ಈಗ ಪ್ರಕರಣದ ವಿರುದ್ಧ ಮೇಲ್ಮನವಿ ಸಲ್ಲಿಸಲು ಯೋಜಿಸಿದ್ದಾರೆ. ಈ ವರ್ಷದ ಏಪ್ರಿಲ್ನಲ್ಲಿ, ತನ್ನ ಎಐ ಸಾಫ್ಟ್ವೇರ್ ರಚಿಸಿದ ಕೆಲಸಕ್ಕೆ ಪೇಟೆಂಟ್ ನೀಡಲು ನಿರಾಕರಿಸಿದ ಯುಎಸ್ ಪೇಟೆಂಟ್ ಮತ್ತು ಟ್ರೇಡ್ ಮಾರ್ಕ್ ಕಚೇರಿಯ ವಿರುದ್ಧ ಥೇಲರ್ ಯುಎಸ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಸುಪ್ರೀಂ ಕೋರ್ಟ್ ಕೂಡ ಇವರ ಆರ್ಜಿಯನ್ನು ತಿರಸ್ಕರಿಸಿತ್ತು. ಎಐ ಆರ್ಟ್ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆರ್ಟ್) ಎಂಬುದು ಎಐ ಸಾಧನದಿಂದ ರಚಿಸಲಾದ ಅಥವಾ ವರ್ಧಿಸಿದ ರೀತಿಯ ಡಿಜಿಟಲ್ ಕಲೆಯಾಗಿದೆ.
ಕೃತಕ ಬುದ್ಧಿಮತ್ತೆ (ಎಐ)ಯು ಯಂತ್ರಗಳಿಗೆ ಅನುಭವದಿಂದ ಕಲಿಯಲು, ಹೊಸ ಇನ್ಪುಟ್ ಹೊಂದಿಕೊಳ್ಳಲು ಮತ್ತು ಮಾನವನಂತಹ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗಿಸುತ್ತದೆ. ಈ ತಂತ್ರಜ್ಞಾನಗಳನ್ನು ಬಳಸಿಕೊಂಡು, ದೊಡ್ಡ ಪ್ರಮಾಣದ ಡೇಟಾವನ್ನು ಸಂಸ್ಕರಿಸುವ ಮೂಲಕ ಮತ್ತು ಡೇಟಾದಲ್ಲಿನ ಮಾದರಿಗಳನ್ನು ಗುರುತಿಸುವ ಮೂಲಕ ನಿರ್ದಿಷ್ಟ ಕಾರ್ಯಗಳನ್ನು ಸಾಧಿಸಲು ಕಂಪ್ಯೂಟರ್ ಗಳಿಗೆ ತರಬೇತಿ ನೀಡಬಹುದು.
ಕೃತಕ ಬುದ್ಧಿಮತ್ತೆ ಎಂಬ ಪದವನ್ನು 1956 ರಲ್ಲಿ ರಚಿಸಲಾಯಿತು. ಆದರೆ ಹೆಚ್ಚಿದ ಡೇಟಾ ಪರಿಮಾಣಗಳು, ಸುಧಾರಿತ ಕ್ರಮಾವಳಿಗಳು ಮತ್ತು ಕಂಪ್ಯೂಟಿಂಗ್ ಶಕ್ತಿ ಮತ್ತು ಸಂಗ್ರಹಣೆಯಲ್ಲಿನ ಸುಧಾರಣೆಗಳ ಕಾರಣದಿಂದ ಎಐ ಇಂದು ಹೆಚ್ಚು ಜನಪ್ರಿಯವಾಗಿದೆ. 1950 ರ ದಶಕದಲ್ಲಿ ಆರಂಭಿಕ ಎಐ ಸಂಶೋಧನೆಯು ಸಮಸ್ಯೆ ಪರಿಹರಿಸುವುದು ಮತ್ತು ಸಾಂಕೇತಿಕ ವಿಧಾನಗಳಂತಹ ವಿಷಯಗಳನ್ನು ಅನ್ವೇಷಿಸಿತ್ತು. 1960 ರ ದಶಕದಲ್ಲಿ, ಯುಎಸ್ ರಕ್ಷಣಾ ಇಲಾಖೆ ಇದರಲ್ಲಿ ಆಸಕ್ತಿ ವಹಿಸಿತು ಮತ್ತು ಮೂಲಭೂತ ಮಾನವ ತಾರ್ಕಿಕತೆಯನ್ನು ಅನುಕರಿಸಲು ಕಂಪ್ಯೂಟರ್ಗಳಿಗೆ ತರಬೇತಿ ನೀಡಲು ಪ್ರಾರಂಭಿಸಿತು.
ಇದನ್ನೂ ಓದಿ : ದೇಶದ ವಾಯುವ್ಯ ಭಾಗ ಹೊರತುಪಡಿಸಿ ಎಲ್ಲೆಡೆ ಮಳೆ ಕೊರತೆ: ಅಕ್ಕಿ, ಧಾನ್ಯಗಳ ಬೆಲೆ ಹೆಚ್ಚಳ