ಬೀಜಿಂಗ್: ಚೀನಾದ ಮೊದಲ ಮಾರ್ಸ್ ರೋವರ್ ತನ್ನ ಲ್ಯಾಂಡಿಂಗ್ ಪ್ಲಾಟ್‌ಫಾರ್ಮ್‌ನಿಂದ ಇಳಿದಿದ್ದು, ಮಂಗಳ ಗ್ರಹದ ಮೇಲೆ ತಿರುಗಾಡಲು ಆರಂಭಿಸಿದೆ ಎಂದು ಚೀನಾದ ಬಾಹ್ಯಾಕಾಶ ಆಡಳಿತ ಶನಿವಾರ ಸ್ಪಷ್ಟನೆ ನೀಡಿದೆ.
ಸೋಲಾರ್ ಚಾಲಿತ ರೋವರ್ ಶನಿವಾರ (ಮೇ 22) 02.40ಕ್ಕೆ ಮಂಗಳ ನೆಲವನ್ನು ಸ್ಪರ್ಶಿಸಿದೆ ಎಂದು ಚೀನಾ ಮಾಹಿತಿ ನೀಡಿದೆ. ಕಳೆದ ಶನಿವಾರ ಅಂದರೆ ಮೇ 15ರಂದು ಮಂಗಳ ಗ್ರಹದಲ್ಲಿ ರೋವರ್ ಹೊತ್ತೊಯ್ದಿದ್ದ ಬಾಹ್ಯಾಕಾಶ ನೌಕೆಯನ್ನು ಚೀನಾ ಇಳಿಸಿತ್ತು. ಈಗ ಬಾಹ್ಯಾಕಾಶ ನೌಕೆಯಿಂದ ರೋವರ್ ಹೊರಬಂದು ಮಂಗಳನ ಮೇಲೆ ಸಂಚರಿಸಲು ಆರಂಭಿಸಿದೆ.
ಚಂದ್ರನ ಮೇಲೆ ರೋವರ್ ಇಳಿಸುವುದಕ್ಕಿಂತ ಮಂಗಳನ ಮೇಲೆ ರೋವರ್ ಇಳಿಸುವುದು ಅತ್ಯಂತ ಸವಾಲಾಗಿದ್ದು, ಅಮೆರಿಕದ ನಂತರ ಈ ಸಾಧನೆ ಮಾಡಿದ ಎರಡನೇ ದೇಶ ಚೀನಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಂದಹಾಗೆ ಚೀನಾ ಮಂಗಳನಲ್ಲಿ ಇಳಿಸಿರುವ ರೋವರ್ ಹೆಸರು ಝುರೋಂಗ್, ಚೀನಾದಲ್ಲಿ ಅಗ್ನಿ ದೇವನನ್ನು ಝೋರೋಂಗ್ ಎಂದೇ ಕರೆಯಲಾಗುತ್ತದೆ. ಬಾಹ್ಯಾಕಾಶ ನೌಕೆ ಮಂಗಳನಲ್ಲಿ ಶನಿವಾರ ತಲುಪಿತ್ತಾದರೂ ಕೆಲವೊಂದು ಪರೀಕ್ಷೆಗಳನ್ನು ನಡೆಸಿ, ರೋವರ್ ಅನ್ನು ಹೊರಗೆ ಇಳಿಸಲಾಗಿದೆ. ಮಂಗಳನಲ್ಲಿ ಜೀವಿಗಳಿರುವ ಬಗ್ಗೆ ಮತ್ತು ಇತರ ಸಂಶೋಧನೆಗಳನ್ನು ಸುಮಾರು 90 ದಿನಗಳವರೆಗೆ ರೋವರ್ ಕೈಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಸರ್ಕಾರದ ದತ್ತಾಂಶಕ್ಕಿಂತ ಕೋವಿಡ್ ಹೆಚ್ಚು ವ್ಯಾಪಕವಾಗಿ ಹರಡಿದೆ: ಐಸಿಎಂಆರ್ ಸಮೀಕ್ಷೆ
ಈಗಾಗಲೇ ಅಮೆರಿಕ ಮಂಗಳನಲ್ಲಿ ಇರಿಸಿರುವ ಪರ್ಸೆವೆರೆನ್ಸ್ ರೋವರ್ ಮತ್ತು ಸಣ್ಣ ಹೆಲಿಕಾಪ್ಟರ್ ಈಗಾಗಲೇ ಗ್ರಹದಲ್ಲಿ ಅನ್ವೇಷಣೆ ನಡೆಸಲು ಮುಂದಾಗಿದೆ. ಜುಲೈನಲ್ಲಿ ಕೆಲವೊಂದು ಸ್ಯಾಂಪಲ್ಗಳನ್ನು ಸಂಗ್ರಹ ಮಾಡಲಿರುವ ಪರ್ಸೆವೆರೆನ್ಸ್ 2031ರೊಳಗೆ ಭೂಮಿಗೆ ವಾಪಸಾಗುವ ಸಾಧ್ಯತೆಯಿದೆ.
ಚೀನಾ ತನ್ನ ಮಂಗಳಯಾನದಲ್ಲಿ ಯಶಸ್ವಿಯಾಗಿದ್ದು, ಬಾಹ್ಯಾಕಾಶ ನಿಲ್ದಾಣ ಸ್ಥಾಪನೆ ಮತ್ತು ಚಂದ್ರನ ಮೇಲೆ ಮನುಷ್ಯನನ್ನು ಇಳಿಸುವುದು ಮುಂತಾದ ಉದ್ದೇಶದ ಯೋಜನೆಗಳನ್ನು ಹಮ್ಮಿಕೊಳ್ಳುವ ಉತ್ಸಾಹ ಹೊಂದಿದೆ.