ಲಂಡನ್( ಯುನೈಟೆಡ್ ಕಿಂಗ್ಡಮ್) : ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಜಗತ್ತಿಗೆ ಎದುರಾಗಬಹುದಾದ ಅಪಾಯಗಳ ಬಗ್ಗೆ ಆತಂಕ ಹೆಚ್ಚಾಗುತ್ತಿರುವ ಮಧ್ಯೆ ಯುಕೆ ಪ್ರಧಾನಿ ರಿಷಿ ಸುನಕ್ ಆಯೋಜಿಸಿದ್ದ ಮೊದಲ 'ಎಐ ಸುರಕ್ಷತಾ ಶೃಂಗಸಭೆ'ಯಲ್ಲಿ ಭಾರತ, ಅಮೆರಿಕ, ಯುಕೆ ಮತ್ತು ಯುರೋಪಿಯನ್ ಯೂನಿಯನ್ ಸೇರಿದಂತೆ ಇತರ 27 ದೇಶಗಳು ಎಐಗೆ ಸಂಬಂಧಿಸಿದ ಅಪಾಯಗಳನ್ನು ಮೌಲ್ಯಮಾಪನ ಮಾಡುವಲ್ಲಿ ಒಟ್ಟಾಗಿ ಕೆಲಸ ಮಾಡುವ ಪ್ರತಿಜ್ಞೆಗೆ ಸಹಿ ಹಾಕಿವೆ. ನವೆಂಬರ್ 1 ರಂದು ಬಕಿಂಗ್ಹ್ಯಾಮ್ ಶೈರ್ ನ ಬ್ಲೆಚ್ಲಿ ಪಾರ್ಕ್ನಲ್ಲಿ ನಡೆದ ಶೃಂಗಸಭೆಯ ಆರಂಭಿಕ ದಿನದಂದು ಈ ಘೋಷಣೆಗೆ ಸಹಿ ಹಾಕಲಾಯಿತು.
"ಎಲ್ಲರನ್ನೂ ಒಳಗೊಂಡ ಆರ್ಥಿಕ ಬೆಳವಣಿಗೆ, ಸುಸ್ಥಿರ ಅಭಿವೃದ್ಧಿ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು, ಮಾನವ ಹಕ್ಕುಗಳು ಮತ್ತು ಮೂಲ ಸ್ವಾತಂತ್ರ್ಯಗಳನ್ನು ರಕ್ಷಿಸಲು ಮತ್ತು ಎಐ ವ್ಯವಸ್ಥೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಅರಿತುಕೊಳ್ಳಲು ಸಾರ್ವಜನಿಕ ನಂಬಿಕೆ ಮತ್ತು ವಿಶ್ವಾಸವನ್ನು ಬೆಳೆಸಲು ಎಐ ತಂತ್ರಜ್ಞಾನ ಕ್ಷೇತ್ರದಲ್ಲಿ ಸಹಕರಿಸುವ ಅಂತಾರಾಷ್ಟ್ರೀಯ ಸಮುದಾಯದ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
"ಅಸ್ತಿತ್ವದಲ್ಲಿರುವ ವೇದಿಕೆಗಳು ಮತ್ತು ಇತರ ಸಂಬಂಧಿತ ಉಪಕ್ರಮಗಳಲ್ಲಿ ಎಐ ತಂತ್ರಜ್ಞಾನದ ಸಂಭಾವ್ಯ ಪರಿಣಾಮ ಪರಿಶೀಲಿಸಲು ಮತ್ತು ಪರಿಹರಿಸಲು ಅಂತರರಾಷ್ಟ್ರೀಯ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ. ಮಾನವ ಹಕ್ಕುಗಳ ರಕ್ಷಣೆ, ಪಾರದರ್ಶಕತೆ ಮತ್ತು ವಿವರಣೆ, ನ್ಯಾಯಸಮ್ಮತತೆ, ಉತ್ತರದಾಯಿತ್ವ, ನಿಯಂತ್ರಣ, ಸುರಕ್ಷತೆ, ಸೂಕ್ತ ಮಾನವ ಮೇಲ್ವಿಚಾರಣೆ, ನೈತಿಕತೆ, ಪಕ್ಷಪಾತ ತಗ್ಗಿಸುವಿಕೆ, ಗೌಪ್ಯತೆ ಮತ್ತು ಡೇಟಾ ರಕ್ಷಣೆಯನ್ನು ಪರಿಹರಿಸುವುದು ಇಂದಿನ ಅಗತ್ಯವಾಗಿದೆ" ಎಂದು ಅದು ಹೇಳಿದೆ.
ವಸತಿ, ಉದ್ಯೋಗ, ಸಾರಿಗೆ, ಶಿಕ್ಷಣ, ಆರೋಗ್ಯ ಮತ್ತು ನ್ಯಾಯ ಸೇರಿದಂತೆ ದೈನಂದಿನ ಜೀವನದ ಹಲವಾರು ಹಂತಗಳಲ್ಲಿ ಎಐನ ಮಹತ್ವವನ್ನು ಬ್ಲೆಚ್ಲಿ ಘೋಷಣೆ ಒತ್ತಿ ಹೇಳಿದೆ. ಈ ಕ್ಷೇತ್ರಗಳಲ್ಲಿ ಎಐ ಬಳಕೆ ಭವಿಷ್ಯದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಏತನ್ಮಧ್ಯೆ, ಯುಕೆಯಲ್ಲಿ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ವೈಜ್ಞಾನಿಕ ಸಂಶೋಧನೆಗಳು ನಿಯಂತ್ರಣ ಮೀರಿ ಮುಂದೆ ಸಾಗಲು ಬಿಡುವ ಮೂಲಕ ದೇಶಗಳು ಸಾಮಾಜಿಕ ಮಾಧ್ಯಮಗಳಿಂದ ಪ್ರತಿನಿಧಿಸಲ್ಪಡುವ ಇಂಟರ್ನೆಟ್ನ ತಪ್ಪು ಮಾಹಿತಿಯ ಅಪಾಯ ಎದುರಿಸುತ್ತಿವೆ. ಭವಿಷ್ಯದಲ್ಲಿ ಎಐ ತಂತ್ರಜ್ಞಾನದಿಂದ ಇಂಥದೇ ಅಪಾಯ ಎದುರಾಗಲು ನಾವು ಅವಕಾಶ ನೀಡಬಾರದು ಎಂದು ಹೇಳಿದರು.
ಇದನ್ನೂ ಓದಿ : ಲಾವಾ 5ಜಿ ಸ್ಮಾರ್ಟ್ಫೋನ್ ಬ್ಲೇಜ್ -2 ಲಾಂಚ್; ಬೆಲೆ ಇಷ್ಟು ಕಡಿಮೆ!