ಬೆಂಗಳೂರು: ಖರ್ಗೆ ಮಗನಾದ ಕಾರಣ ಸಚಿವರಾದರು ಎನ್ನುವ ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷ ಹೇಗಾದರು?. ಆರ್ಎಸ್ಎಸ್ನ ಎಷ್ಟು ಶಾಖೆ ಅಟೆಂಡ್ ಮಾಡಿ ಅಧ್ಯಕ್ಷರಾದರು?. ಖರ್ಗೆ ಪುತ್ರ ಎಂಬ ಹೆಮ್ಮೆ ನನಗಿದೆ. ಬಿಜೆಪಿಯವರಿಗೆ ಯಾಕೆ ಅವರ ಅಪ್ಪಂದಿರ ಬಗ್ಗೆ ಗೌರವ ಇಲ್ಲ ಎಂದು ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಇಂದು ಮಾತನಾಡಿದ ಅವರು, ಬ್ಯಾಟ್ ಹಿಡಿಯಲು ಬಾರದವರನ್ನು ಐಸಿಸಿ ಅಧ್ಯಕ್ಷರನ್ನಾಗಿ ಮಾಡಿದರು. ಅವರಾದರೆ ಹಾಗೆ ನೇಮಕವಾಗಬಹುದು. ನಾವೂ ಆದರೆ ಸೆಲೆಕ್ಟೆಡ್ ಆಗಬೇಕಾ?. ಕುಟುಂಬ ರಾಜಕಾರಣದ ಬಗ್ಗೆ ಅವರು ಮಾತನಾಡುತ್ತಾರೆ. ಕುಟುಂಬ ರಾಜಕಾರಣ ಎಂಬುದು ನಮ್ಮಲ್ಲಿದ್ಯಾ, ಅವರಲ್ಲಿದ್ಯಾ ಎಂದು ತೀಕ್ಷ್ಣವಾಗಿ ಕೇಳಿದರು.
ನನ್ನ ವಿರುದ್ಧ ಆಪಾದನೆ ಮಾಡುವುದಾದರೆ ಸರಿಯಾದ ದಾಖಲೆ ಸಮೇತವಾಗಿ ಮಾಡಲಿ. ಸಚಿನ್ ಸಾವಿನ ಪತ್ರದಲ್ಲಿ ಎಲ್ಲಿಯೂ ನನ್ನ ಹೆಸರನ್ನು ಉಲ್ಲೇಖಿಸಿಲ್ಲ. ಬಿಜೆಪಿಗರು ಸುಖಾಸುಮ್ಮನೆ ನನ್ನ ಬಗ್ಗೆ ವಾದ ಮಾಡುತ್ತಿದ್ದಾರೆ. ಸಿ.ಟಿ.ರವಿ, ಛಲವಾದಿ ನಾರಾಯಣಸ್ವಾಮಿ, ಪಿ.ರಾಜೀವ್ ಸುಳ್ಳು ಆರೋಪ ಮಾಡಿದ್ದಾರೆ. ಅವರೀಗ ಸುಳ್ಳಿನ ಶೂರರಾಗಿದ್ದಾರೆ. ಇವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಈ ಹಿಂದೆಯೇ ಹಾಕಿದ್ದೆ. ಅವರು ಹಿಟ್ ಆ್ಯಂಡ್ ರನ್ ಹೇಳಿಕೆ ನೀಡುವಲ್ಲಿ ಪಿಎಚ್‌ಡಿ ಪಡೆದಿದ್ದಾರೆ ಎಂದು ಟೀಕಿಸಿದರು.
ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ನೇತೃತ್ವದಲ್ಲಿ ಕಲಬುರಗಿಯಲ್ಲಿ ನನ್ನ ವಿರುದ್ಧ ಮುತ್ತಿಗೆ ಹಾಕಲು ಮುಂದಾಗುತ್ತಿದ್ದಾರೆ. ರಾಠೋಡ್ ವಿರುದ್ಧ 20-30 ಕೇಸ್ ಇದ್ದರೂ ಕ್ರಮ ಆಗಿಲ್ಲ. ಆತ ಈ ಹಿಂದೆ ನನಗೆ ಜೀವ ಬೆದರಿಕೆ ಕೂಡ ಹಾಕಿದ್ದ ಎಂಬ ಆಡಿಯೋವನ್ನು ಇದೇ ವೇಳೆ ಸಚಿವರು ಬಿಡುಗಡೆ ಮಾಡಿದ್ದರು. ಇದೀಗ ಆತನ ನೇತೃತ್ವದಲ್ಲಿ ಕಲಬುರಗಿ ಚಲೋ ಹಮ್ಮಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ನನ್ನ ಹೆಸರಿನ ಉಲ್ಲೇಖವಿಲ್ಲ. ಇದಕ್ಕೂ ನನಗೆ ಸಂಬಂಧ ಇಲ್ಲ. ಹಾಗಿದ್ದರೂ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಗುತ್ತಿಗೆದಾರರ ಸಂತೋಷ್ ಪಾಟೀಲ್ ಬರೆದ ಡೆತ್ ನೋಟ್ ಓದಿದ ಅವರು, ಸಂತೋಷ್ ಪಾಟೀಲ್ ನನ್ನ ಸಾವಿಗೆ ನೇರ ಕಾರಣ ಕೆ.ಎಸ್.ಈಶ್ವರಪ್ಪ, ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಸಂತೋಷ್ ಪಾಟೀಲ್ ತಮ್ಮ ಡೆತ್ ನೋಟ್‌ನಲ್ಲಿ ಉಲ್ಲೇಖ ಮಾಡಿದ್ದರು. ಇದುವರೆಗೂ ಅವರ ಕುಟುಂಬವನ್ನು ಭೇಟಿ ಮಾಡಿಲ್ಲ ಎಂದು ಟೀಕಿಸಿದರು.
ನನ್ನ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ಪತ್ರ ಬರೆದಿರುವ ಕುರಿತು ಮಾತನಾಡಿದ ಅವರು, ಸಂಪುಟದಲ್ಲಿ ಯಾರನ್ನು ಇಟ್ಟುಕೊಳ್ಳುವುದು, ಬಿಡುವುದು ಎಂಬುದು ಮುಖ್ಯಮಂತ್ರಿಗಳ ವಿಚಾರಕ್ಕೆ ಬಿಟ್ಟಿದ್ದು ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಪೋಸ್ಟರ್ ಅಂಟಿಸಿದ ಆರೋಪ: 13 ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್