ಬಾರಾಮುಲ್ಲಾ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಬುಧವಾರ ಮತ್ತು ಗುರುವಾರ ಮಧ್ಯರಾತ್ರಿ ಸೇನಾಪಡೆಗಳ ಗುಂಡಿನ ದಾಳಿಯಿಂದ ಟ್ರಕ್ ಚಾಲಕನೊಬ್ಬ ಸಾವಿಗೀಡಾಗಿದ್ದಾನೆ ಎಂದು ಆರೋಪಿಸಲಾಗಿದೆ. ಮೃತ ವ್ಯಕ್ತಿಯನ್ನು ಸೋಪೋರ್ನ ಗೋರಿಪೊರಾದ ವಸೀಮ್ ಅಹ್ಮದ್ ಮಲ್ಲಾ ಎಂದು ಗುರುತಿಸಲಾಗಿದ್ದು, ಬಾರಾಮುಲ್ಲಾದಿಂದ ಶ್ರೀನಗರಕ್ಕೆ ತೆರಳುತ್ತಿದ್ದಾಗ ಉತ್ತರ ಕಾಶ್ಮೀರ ಜಿಲ್ಲೆಯ ಡೆಲಿನಾ ಪ್ರದೇಶದಲ್ಲಿ ಸೇನೆಯು ಆತನನ್ನು ತಡೆದಿತ್ತು.
ಗುರುವಾರ ಬೆಳಗ್ಗೆ ಬಿಡುಗಡೆ ಮಾಡಿದ ಸೇನೆಯ ಹೇಳಿಕೆಯ ಪ್ರಕಾರ, ಸಂಭಾವ್ಯ ಭಯೋತ್ಪಾದಕ ಚಲನವಲನಗಳ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಗಳನ್ನು ಆಧರಿಸಿ ಸೇನಾಪಡೆ ಯೋಧರು ಬುಧವಾರ ಡೆಲಿನಾದಲ್ಲಿ ಮೊಬೈಲ್ ವಾಹನ ಚೆಕ್ ಪೋಸ್ಟ್ (ಎಂವಿಸಿಪಿ) ಸ್ಥಾಪಿಸಿದ್ದರು. ಅತ್ಯಂತ ವೇಗವಾಗಿ ಚಲಿಸುತ್ತಿದ್ದ ನಾಗರಿಕ ಟ್ರಕ್ ನಿಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ, ಚಾಲಕ ವೇಗವನ್ನು ಮತ್ತಷ್ಟು ಹೆಚ್ಚಿಸಿ ಚೆಕ್ ಪಾಯಿಂಟ್ ಪಾಸ್ ಮಾಡಿ ಹೋದ. ನಂತರ ಯೋಧರು ಆ ವಾಹನವನ್ನು 23 ಕಿ.ಮೀ.ಗೂ ಹೆಚ್ಚು ದೂರ ಹಿಂಬಾಲಿಸಿದ್ದರು. ಟ್ರಕ್ ನಿಲ್ಲಿಸುವ ಸಲುವಾಗಿ ಟೈರ್ಗಳಿಗೆ ಗುಂಡು ಹಾರಿಸಲಾಗಿತ್ತು. ಆಗ ಟ್ರಕ್ ಸಂಗ್ರಾಮ್ ಚೌಕ್ನಲ್ಲಿ ನಿಂತಿತು.
OP AMARGAD, Baramulla
— Chinar Corps🍁 - Indian Army (@ChinarcorpsIA) February 6, 2025
On 05 Feb 2025, based on a specific intelligence input about move of terrorists, a Mobile Vehicle Check Post (MVCP) was established by Security Forces.
One speeding suspicious civil truck was spotted. When challenged, the truck didn't stop despite repeated… pic.twitter.com/8fP4yDBYBb
"ವಾಹನವನ್ನು ಪರಿಶೀಲನೆ ಮಾಡಿದಾಗ ಚಾಲಕ ಗಾಯಗೊಂಡಿರುವುದು ಕಂಡು ಬಂದಿತ್ತು ಮತ್ತು ತಕ್ಷಣ ಭದ್ರತಾ ಪಡೆಗಳು ಆತನನ್ನು ಬಾರಾಮುಲ್ಲಾದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಅಲ್ಲಿನ ವೈದ್ಯರು ಚಾಲಕ ಮೃತಪಟ್ಟಿರುವುದಾಗಿ ಘೋಷಿಸಿದರು" ಎಂದು ಸೇನೆ ತಿಳಿಸಿದೆ.
ಸಂಪೂರ್ಣ ಲೋಡ್ ಆಗಿರುವ ಟ್ರಕ್ ಅನ್ನು ಶೋಧಕ್ಕಾಗಿ ಹತ್ತಿರದ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ. ಶಂಕಿತನ ಪೂರ್ವಾಪರಗಳ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಸೇನೆ ತಿಳಿಸಿದೆ. ಸಾವಿಗೆ ಕಾರಣವನ್ನು ಕಂಡುಹಿಡಿಯಲು ಹತ್ಯೆಗೀಡಾದ ಚಾಲಕನ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಭಾವ್ಯ ದಾಳಿಗಳನ್ನು ತಡೆಯಲು ಸೇನೆಯ ರಾಷ್ಟ್ರೀಯ ರೈಫಲ್ಸ್ ವಿಭಾಗವು ಮೊಬೈಲ್ ವಾಹನ ಚೆಕ್ ಪೋಸ್ಟ್ (ಎಂವಿಸಿಪಿ) ಸ್ಥಾಪಿಸಿದೆ ಎಂಬ ಮಾಹಿತಿ ಬಂದಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ವಕ್ತಾರರು ಘಟನೆಯ ಬಗ್ಗೆ ಹೇಳಿಕೆ ನೀಡಿದ್ದಾರೆ. "ಸೈನಿಕರು ಟ್ರಕ್ ಅನ್ನು 23 ಕಿ.ಮೀ.ಗಿಂತಲೂ ಹೆಚ್ಚು ದೂರದವರೆಗೆ ಹಿಂಬಾಲಿಸಿದರು ಮತ್ತು ಪ್ರೋಟೋಕಾಲ್ ಪ್ರಕಾರ, ಟೈರ್ ಪಂಕ್ಚರ್ ಮಾಡಲು ಟೈರ್ಗಳ ಮೇಲೆ ಗುಂಡು ಹಾರಿಸಿದರು. ಆಗ ವಾಹನ ಸಂಗ್ರಾಮ ಚೌಕ್ನಲ್ಲಿ ನಿಂತಿತು" ಎಂದು ವಕ್ತಾರರು ಹೇಳಿದರು.
"ಶಾಂತಿ ಕಾಪಾಡುವಂತೆ ಮತ್ತು ಘಟನೆಯ ಬಗ್ಗೆ ವದಂತಿಗಳು ಅಥವಾ ತಪ್ಪು ಮಾಹಿತಿಯನ್ನು ಹರಡದಂತೆ ನಾವು ಜನರಿಗೆ ಮನವಿ ಮಾಡುತ್ತಿದ್ದೇವೆ. ಸಮಗ್ರ ತನಿಖೆ ನಡೆಯುತ್ತಿದೆ ಮತ್ತು ಮುಂದಿನ ಬೆಳವಣಿಗೆಗಳ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು. ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಅಥವಾ ಸುಳ್ಳು ಮಾಹಿತಿಯನ್ನು ಹರಡುವ ಪ್ರಯತ್ನ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ತಿಳಿಸಿದರು.