ದಾವಣಗೆರೆ: ಭದ್ರಾ ಜಲಾಶಯದಿಂದ ನೀರು ಹರಿಸಿ 20 ದಿನ ಕಳೆದರೂ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪಿಲ್ಲ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭದ್ರಾ ಜಲಾಶಯದ ನೀರು ಜಿಲ್ಲೆಯ ಜೀವನಾಡಿಯಾಗಿದ್ದು, ಈ ನೀರು ನಂಬಿ ಲಕ್ಷಾಂತರ ಎಕರೆ ಭೂಮಿಯಲ್ಲಿ ರೈತರು ಭತ್ತ ಬೆಳೆಯುತ್ತಿದ್ದಾರೆ. ತಿಂಗಳು ಸಮೀಪವಾದರೂ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬರುತ್ತಿಲ್ಲ. ಆದರೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಾಣಿವಿಲಾಸ ಸಾಗರ ಕೋಡಿ ಬಿದ್ದಿದ್ದು, ಅಪ್ಪರ್ ಭದ್ರ ಯೋಜನೆ ಮೂಲಕ ಈ ಜಲಾಶಯಕ್ಕೆ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸುವಂತೆ ಅಚ್ಚುಕಟ್ಟು ಪ್ರದೇಶದ ರೈತರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಭದ್ರಾ ಜಲಾಶಯದ ನೀರನ್ನು ನಂಬಿ ಭತ್ತ ನಾಟಿ ಮಾಡಿರುವ ಲಕ್ಷಾಂತರ ರೈತರು ನೀರಿಗಾಗಿ ಕಾದು ಕೂಳಿತಿದ್ದಾರೆ. ಹರಿಹರ, ದಾವಣಗೆರೆ ಗ್ರಾಮಾಂತರ, ಮಲೇಬೆನ್ನೂರಿನ ಕೊನೆ ಭಾಗದ ರೈತರು ಸೇರಿದಂತೆ ಹತ್ತಾರು ಹಳ್ಳಿಗಳು ನೀರಿನ ದಾರಿ ಕಾಯುತ್ತಿವೆ. ತಿಂಗಳು ಸಮೀಪವಾದರೂ ಈ ಪ್ರದೇಶಕ್ಕೆ ನೀರು ಬರುತ್ತಿಲ್ಲ. ಚನ್ನಗಿರಿಯ ತ್ಯಾವಣಿಗೆ ಉಪವಿಭಾಗ ಮಧ್ಯ ಭಾಗವಾದ ಕುಕ್ಕುವಾಡ, ಕೊನೆ ಭಾಗ ಕೊಳೇನಹಳ್ಳಿ, ನಾಗರಸನಹಳ್ಳಿ ಗ್ರಾಮದ ರೈತರು ನೀರಿಗಾಗಿ ಹವಣಿಸುತ್ತಿದ್ದಾರೆ. ಬೇಸಿಗೆ ಹಂಗಾಮಿನಲ್ಲಿ ಜಿಲ್ಲೆಯಲ್ಲಿ 1.50 ಲಕ್ಷ ಎಕರೆಯಲ್ಲಿ ಭತ್ತ ಬೆಳೆಯಲಾಗುತ್ತದೆ. ಈ ಹಂಗಾಮಿನಲ್ಲಿ ಹೆಚ್ಚು ಇಳುವರಿ ಬರುವುದರಿಂದ ಒಟ್ಟು 4.50 ಲಕ್ಷ ಕ್ವಿಂಟಾಲ್ ಭತ್ತ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಈಗಿನ ಬೆಲೆಗೆ ಸಾವಿರಾರು ಕೋಟಿ ವಹಿವಾಟು ಆಗಬಹುದು. ಬೆಲೆಯೂ ಉತ್ತಮವಾಗಿದ್ದು, ಲಾಭದಾಯಕ ಬೆಳೆಗಾಗಿ ರೈತರು ಎದುರು ನೋಡುತ್ತಿದ್ದಾರೆ. ಹಾಗಾಗಿ ಅಪ್ಪರ್ ಭದ್ರ ಯೋಜನೆ ಮೂಲಕ ಈ ಜಲಾಶಯಕ್ಕೆ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸುವಂತೆ ಅಚ್ಚುಕಟ್ಟು ಪ್ರದೇಶದ ರೈತರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಅಪ್ಪರ್ ಭದ್ರಾಕ್ಕೆ 700 ಕ್ಯೂಸೆಕ್ ನೀರು: ತಿಂಗಳು ಸಮೀಪವಾದರೂ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬರುತ್ತಿಲ್ಲ. ಆದರೆ, ಚಿತ್ರದುರ್ಗ ಜಿಲ್ಲೆಯ ಅಪ್ಪರ್ ಭದ್ರಾ ಯೋಜನೆಯಡಿಯಲ್ಲಿ ವಿವಿ ಸಾಗರಕ್ಕೆ, ಚಳ್ಳಕೆರೆ ಕೆಲ ಬ್ಯಾರೇಜ್ಗಳಿಗೆ ದಿನನಿತ್ಯ 700 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ. ಇದನ್ನು ಖಂಡಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯ ಮಾಡಿಕೊಂಡಿದ್ದಾರೆ. ಭದ್ರಾ ಜಲಾಶಯದಿಂದ ಭಾದ್ರಾ ಮೇಲ್ದಂಡೆಗೆ ಪ್ರತಿದಿನ 700 ಕ್ಯೂಸೆಕ್ ನೀರು ಬಿಡುಗಡೆ ಮಾಡುತ್ತೇವೆ ಅನ್ನೋದು ಅನ್ಯಾಯ. ಒಂದು ತಿಂಗಳಾದರೂ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಕುಡಿಯಲು ನೀರು ಬರುತ್ತಿಲ್ಲ. ಆದರೂ, ಕೂಡ ಅಲ್ಲಿಗೆ (ಭದ್ರಾ ಮೇಲ್ದಂಡೆ) ನೀರು ಕೊಡುತ್ತೇವೆ ಅನ್ನೋದು ಹಾಸ್ಯಾಸ್ಪದ. ಭದ್ರಾ ಮೇಲ್ದಂಡೆಗೆ ನೀರು ಬಿಡುಗಡೆ ಮಾಡುವುದಕ್ಕೂ ಮುನ್ನ ತುಂಗಭದ್ರಾದಿಂದ ನಮ್ಮ ಭದ್ರಾ ಜಲಾಶಕ್ಕೆ ನೀರು ಬಿಡಬೇಕು. ಆ ಬಳಿಕ ಭದ್ರಾ ಜಲಾಶದಿಂದ ಭದ್ರಾ ಮೇಲ್ದಂಡೆಗೆ ನೀರು ಬಿಡುಗಡೆ ಮಾಡಿಕೊಳ್ಳಲಿ. ಆದರೆ, ಇದ್ಯಾವುದನ್ನು ಪರಿಗಣಿಸದೇ, ಅವೈಜ್ಞಾನಿಕವಾಗಿ ಭದ್ರಾ ಮೇಲ್ದಂಡೆಗೆ ಕೊಡುತ್ತೇವೆ ಅನ್ನೋದು ತಪ್ಪು. ಇದರಿಂದ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಬಹಳ ಅನ್ಯಾಯವಾಗುತ್ತದೆ. ಅವೈಜ್ಞಾನಿಕವಾಗಿ ನೀರು ಹರಿಸುತ್ತಿರುವುದು ದಾವಣಗೆರೆ ರೈತರಿಗೆ ಅನ್ಯಾಯ ಮಾಡಿದಂತೆ. ವಿವಿ ಸಾಗರ, ಚಳ್ಳಕೆರೆ ಬೇರೆ ಭಾಗಕ್ಕೆ ನೀರು ಹೋಗ್ತಿದೆ. ವಿವಿ ಸಾಗರ ಭರ್ತಿಯಾಗಿ ಕೋಡಿ ಬಿದ್ದಿದೆ. ಇತಂಹ ಸಂಧರ್ಭದಲ್ಲಿ ನೀರು ಕೊಡುವುದು ಸಮಜಂಸ ಅಲ್ಲ ಎಂದು ರೈತ ಮುಖಂಡ ಕೊಳೇನಹಳ್ಳಿ ಸತೀಶ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರಕ್ಕೆ ಹಿಡಿಶಾಪ: ಭದ್ರಾ ಅಚ್ಚುಕಟ್ಟಿನ ರೈತರಿಗೆ ನೀರು ನೀಡದೇ ಚಿತ್ರದುರ್ಗ ಅಪ್ಪರ್ ಭದ್ರಾ (ಭದ್ರಾ ಮೇಲ್ದಂಡೆ)ಗೆ ನೀರು ಕೊಡುತ್ತಿರುವುದು ಸರಿ ಅಲ್ಲ. ಕೊನೆ ಭಾಗದ ರೈತರಿಗೆ ನೀರು ತಲುಪಿಲ್ಲ. ಹೀಗಾದರೆ ದಾವಣಗೆರೆಯ ಕೃಷಿ ಭೂಮಿ ಬರಡು ಭೂಮಿ ಆಗಲಿದೆ. ನೀರು ಕಾಯಲು, ನೀರಿನ ಹೋರಾಟಕ್ಕಾಗಿ ಮನೆಯಿಂದ ಒಬ್ಬೊಬ್ಬರಂತೆ ಮನೆ ಮಕ್ಕಳನ್ನು ಯೋಧರಂತೆ ನೀರು ಕಾಯಲು ತಯಾರು ಮಾಡಬೇಕಾಗುತ್ತದೆ ಎಂದು ಮತ್ತೊಬ್ಬ ರೈತ ಮುಖಂಡ ಕಡ್ಲೆಬಾಳು ಧನಂಜಯ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮೈಲಾರಲಿಂಗೇಶ್ವರ ಜಾತ್ರೆ; ಫೆ. 5 ರಿಂದ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - MAILARLINGESHWAR JATHRE