ಇಸ್ರೋದ ವಿಕ್ರಮ್ ಲ್ಯಾಂಡರ್ ತನ್ನ ಸಾಮರ್ಥ್ಯದ ವಿಚಾರದಲ್ಲಿ ಎಲ್ಲ ನಿರೀಕ್ಷೆಗಳನ್ನು ಮೀರಿ ಸಾಧನೆ ನಿರ್ಮಿಸಿದೆ ಎಂದು ಇಸ್ರೋ ಟ್ವೀಟ್ ಮೂಲಕ ತಿಳಿಸಿದೆ. ಇಸ್ರೋ ಕೈಗೊಂಡ ಮಹತ್ತರ ಹಾಪ್ ಪ್ರಯೋಗದಲ್ಲಿ, ವಿಕ್ರಮ್ ಲ್ಯಾಂಡರ್ ತನ್ನನ್ನು ತಾನು 30 - 40 ಸೆಂಟಿಮೀಟರ್ ತ್ರಿಜ್ಯದೊಳಗೆ 40 ಸೆಂಟಿಮೀಟರ್‌ಗಳಷ್ಟು ಮೇಲೇರಿದೆ. ಈ ಮಹತ್ವದ ಸಾಧನೆ ಭವಿಷ್ಯದ ಬಾಹ್ಯಾಕಾಶ ಯೋಜನೆಗಳ ಕುರಿತು ನಂಬಿಕೆ ಮೂಡಿಸಿ, ಬಾಹ್ಯಾಕಾಶ ಅನ್ವೇಷಣೆಗಳಲ್ಲಿ ಇಸ್ರೋದ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಈ ಮೂಲಕ ಲ್ಯಾಂಡರ್ ತನ್ನ ಸಿಸ್ಟಮ್‌ಗಳು ಮತ್ತು ಉಪಕರಣಗಳ ಯಶಸ್ವಿ ಕಾರ್ಯಾಚರಣೆಯನ್ನು ಸಾಬೀತುಪಡಿಸಿದೆ.
ವಿಕ್ರಮ್ ಲ್ಯಾಂಡರ್‌ನ ಯಶಸ್ವಿ ಹಾಪ್ ಪ್ರಯೋಗ ಹಲವು ಕಾರಣಗಳಿಂದ ಮಹತ್ವದ್ದಾಗಿದೆ:
1. ಮಹತ್ವದ ತಾಂತ್ರಿಕ ಸಾಧನೆ: ಲ್ಯಾಂಡರ್ ಬಹುತೇಕ 40 ಸೆಂಟಿಮೀಟರ್‌ಗಳಷ್ಟು ಮೇಲಕ್ಕೆ ತನ್ನನ್ನು ತಾನು ಒಯ್ದು, ಆಮೇಲೆ ನಿಖರವಾದ ಸ್ಥಾನದಲ್ಲಿ ಮರಳಿ ಕೆಳಗಿಳಿದಿರುವುದು ಭಾರತದ ಆಧುನಿಕ ಇಂಜಿನಿಯರಿಂಗ್ ಸಾಮರ್ಥ್ಯ ಹಾಗೂ ನಿಖರ ಯೋಜನಾ ನಿಯಂತ್ರಣವನ್ನು ಪ್ರದರ್ಶಿಸಿವೆ. ಇವುಗಳು ಭವಿಷ್ಯದ ಬಾಹ್ಯಾಕಾಶ ಯೋಜನೆಗಳಲ್ಲಿ ಅತ್ಯಂತ ಮುಖ್ಯವಾಗಿವೆ.
2. ತಂತ್ರಜ್ಞಾನದ ಮೌಲ್ಯೀಕರಣ: ಈ ಪ್ರಯೋಗ, ವಿಕ್ರಮ್ ಲ್ಯಾಂಡರ್‌ನಲ್ಲಿ ಬಳಸಿರುವ ತಂತ್ರಜ್ಞಾನ ಹಾಗೂ ಸಿಸ್ಟಮ್‌ಗಳ ಮೌಲ್ಯೀಕರಣ ನಡೆಸಿದೆ. ವಾಸ್ತವ ಜಗತ್ತಿನ ಪರಿಸ್ಥಿತಿಯಲ್ಲಿ, ಈ ಲ್ಯಾಂಡರ್ ಅಂದುಕೊಂಡ ರೀತಿಯಲ್ಲೇ ಕಾರ್ಯಾಚರಣೆ ನಡೆಸಲಿದೆ ಎನ್ನುವುದು ಇದರಿಂದ ಸಾಬೀತಾಗಿದೆ. ಭವಿಷ್ಯದ ಯೋಜನೆಗಳಿಗೆ ಇಂತಹ ಸಿಸ್ಟಮ್‌ಗಳನ್ನು ನಿರ್ಮಿಸಲು ಇದು ಹೆಚ್ಚಿನ ಆತ್ಮವಿಶ್ವಾಸ ಒದಗಿಸಲಿದೆ.
3. ಮಾದರಿಗಳನ್ನು ಭೂಮಿಗೆ ತರುವುದು ಮತ್ತು ಮಾನವ ಸಹಿತ ಯೋಜನೆಗಳು: ಹಾಪ್ ಪರೀಕ್ಷೆಯಲ್ಲಿ ಭಾರತ ಯಶಸ್ಸು ಸಾಧಿಸಿರುವುದರಿಂದ, ಭವಿಷ್ಯದಲ್ಲಿ ಮಾದರಿಗಳನ್ನು ಭೂಮಿಗೆ ತರುವುದು ಮತ್ತು ಮಾನವ ಸಹಿತ ಯೋಜನೆಗಳಿಗೆ ಭಾರೀ ಪ್ರಯೋಜನವಾಗಲಿದೆ. ಆಕಾಶಕಾಯಗಳ ಮೇಲೆ ನಿಖರವಾಗಿ ಸಂಚರಿಸುವುದು ಮತ್ತು ಅವುಗಳ ಮೇಲ್ಮೈಯಲ್ಲಿ ಇಳಿಯುವುದು ಮಹತ್ವದ ಮಾದರಿಗಳನ್ನು ಸಂಗ್ರಹಿಸಲು ಮತ್ತು ಮಾನವಸಹಿತ ಬಾಹ್ಯಾಕಾಶ ಯೋಜನೆಗಳನ್ನು ಕೈಗೊಳ್ಳಲು ಅತ್ಯಂತ ಮಹತ್ವದ್ದಾಗಿದೆ.
4. ಸಿಸ್ಟಮ್‌ಗಳ ಆರೋಗ್ಯ: ಲ್ಯಾಂಡರ್‌ನ ಎಲ್ಲ ಸಿಸ್ಟಮ್‌ಗಳು ಸಹಜವಾಗಿ ಕಾರ್ಯಾಚರಿಸಿರುವುದು ಅದರ ಎಲ್ಲ ಉಪಕರಣಗಳು ಸಮರ್ಪಕವಾಗಿ ಕಾರ್ಯಾಚರಿಸುತ್ತಿವೆ ಎನ್ನುವುದನ್ನು ಪ್ರದರ್ಶಿಸಿದೆ. ಅಂದರೆ, ಲ್ಯಾಂಡರ್ ತನ್ನ ಉದ್ದೇಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರಿಯಾದ ಹಾದಿಯಲ್ಲಿದ್ದು, ಯಶಸ್ವಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.
5. ನಿಯೋಜಿಸಬಹುದಾದ ಉಪಕರಣಗಳು: ರಾಂಪ್, ಚಾಸ್ಟ್ (ChaSTE), ಹಾಗೂ ಐಎಲ್ಎಸ್ಎ ರೀತಿಯ ಉಪಕರಣಗಳನ್ನು ಯಶಸ್ವಿಯಾಗಿ ನಿಯೋಜಿಸುವುದು ಮತ್ತು ಮರಳಿ ಪಡೆಯುವುದರಿಂದ, ಇಂತಹ ಮಹತ್ತರ ಉಪಕರಣಗಳನ್ನು ಬಳಸಿ, ಮರಳಿ ಸಂಗ್ರಹಿಸಿ, ಲ್ಯಾಂಡರ್ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸಲು ಸಾಧ್ಯವಾಗುತ್ತದೆ.
ಒಟ್ಟಾರೆ, ಈ ಹಾಪ್ ಪರೀಕ್ಷೆ ಲ್ಯಾಂಡರ್‌ನ ಸಾಮರ್ಥ್ಯಗಳನ್ನು ಪ್ರದರ್ಶಿಸಿ, ಅದರ ವ್ಯವಸ್ಥೆಗಳ ಮೇಲಿನ ನಂಬಿಕೆಗಳನ್ನು ಹೆಚ್ಚಿಸಿದೆ. ಆ ಮೂಲಕ ಮಾನವ ಸಹಿತ ಬಾಹ್ಯಾಕಾಶ ಅನ್ವೇಷಣೆ ಹಾಗೂ ಆಕಾಶಕಾಯಗಳಿಂದ ಮಹತ್ವದ ಮಾಹಿತಿಗಳನ್ನು ಪಡೆಯುವಂತಹ ಇನ್ನಷ್ಟು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಹಾದಿ ಮಾಡಿಕೊಟ್ಟಿದೆ.
-ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ, ರಕ್ಷಣಾ ಮತ್ತು ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ: ಎತ್ತರ ಹೆಚ್ಚಿಸಿಕೊಂಡು ಮತ್ತೆ ಸಾಫ್ಟ್ ಲ್ಯಾಂಡ್ ಆದ ವಿಕ್ರಮ್ ಲ್ಯಾಂಡರ್; ಇಸ್ರೊದ ಮತ್ತೊಂದು ಮಹತ್ಸಾಧನೆ