ಮೂಡುಬಿದಿರೆ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆಪಾದನೆಯಡಿ ಕಲ್ಲಮುಂಡ್ಕೂರಿನ ಯುವಕನನ್ನು ಮಂಗಳೂರಿನ ಮಹಿಳಾ ಪೊಲೀಸರು ಬಂಧಿಸಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ತಾಸೆ ವಾದಕ ಸತೀಶ್ ಅಂಚನ್ ಬಂಧಿತ ಆರೋಪಿ. ಸತೀಶ್ ಅಂಚನ್ಗೆ ತನ್ನ ಊರಿನ ಅಪ್ರಾಪ್ತೆಯೊಬ್ಬಳ ಸ್ನೇಹವಾಗಿದ್ದು, ಆಕೆಯೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದ ಎನ್ನಲಾಗಿದೆ. ಜುಲೈ ತಿಂಗಳಲ್ಲಿ ಅಪ್ರಾಪ್ತೆಯು ಕಲ್ಲಮುಂಡ್ಕೂರು ಎಂಬಲ್ಲಿ ನಡೆದುಕೊಂಡು ಬರುತ್ತಿದ್ದಾಗ ಆರೋಪಿ ಸತೀಶ್, ಆಕೆಯನ್ನು ಬಲವಂತವಾಗಿ ತನ್ನ ರಿಕ್ಷಾದಲ್ಲಿ ಕುಳ್ಳಿರಿಸಿ ಕಲ್ಲು ಕ್ವಾರೆಯೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ.
ಆ ಬಳಿಕ 'ನಿನ್ನ ನಗ್ನ ಫೋಟೊ ನನ್ನ ಬಳಿ ಇವೆ' ಎಂದು ಬ್ಲ್ಯಾಕ್‍ಮೇಲ್ ಮಾಡಿ, 'ಈ ವಿಷಯ ಎಲ್ಲಿಯಾದರು ಬಾಯಿ ಬಿಟ್ಟರೆ ನಿನ್ನನ್ನು ಮತ್ತು ನಿನ್ನ ಮನೆಯವರನ್ನು ಕೊಲ್ಲುವುದಾಗಿ' ಬೆದರಿಸಿದ್ದಾನೆ ಎನ್ನಲಾಗಿದೆ. ಅಪ್ರಾಪ್ತೆಯ ಮನೆಯವರು ನೀಡಿದ ದೂರಿನಂತೆ ಮಂಗಳೂರಿನ ಮಹಿಳಾ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.