ಮುಂಬೈ : ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿಯನ್ನು ಅಲಿಬಾಗ್ ಶಾಲೆಯಿಂದ ಮುಂಬೈನ ತಾಲೋಜ ಕೇಂದ್ರ ಕಾರಾಗೃಹಕ್ಕೆ ರಾಯಗಢ ಪೊಲೀಸರು ಶಿಫ್ಟ್ ಮಾಡಿದ್ದಾರೆ.
ಕೈದಿಗಳಿಗಾಗಿ ಕೋವಿಡ್-19 ಕೇಂದ್ರವನ್ನಾಗಿ ಅಲಿಬಾಗ್ ಶಾಲೆಯನ್ನು ಮಾರ್ಪಾಡು ಮಾಡಲಾಗಿದೆ. ನವೆಂಬರ್ 4ರಂದು ಬಂಧನವಾಗಿದ್ದ ಅರ್ನಬ್ ಗೋಸ್ವಾಮಿಯನ್ನು ತಾತ್ಕಾಲಿಕವಾಗಿ ಇಲ್ಲಿ ಇರಿಸಲಾಗಿತ್ತು.
2018ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಆತ್ಮಹತ್ಯೆ ಮಾಡ್ಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ನಬ್ ಗೋಸ್ವಾಮಿ ಹಾಗೂ ಇತರ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದರು.
ಆರೋಪಿಗಳನ್ನು ನವೆಂಬರ್ 18ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಅಲಿಬಾಗ್ ನ್ಯಾಯಾಲಯವು ಆದೇಶ ನೀಡಿತ್ತು. ಗೋಸ್ವಾಮಿಯನ್ನು ಜೈಲಿಗೆ ಸ್ಥಳಾಂತರಿಸಿದ್ದನ್ನು ಖಂಡಿಸಿರುವ ಅರ್ನಬ್ ಪತ್ನಿ ಸಂಬ್ರಾತಾ ರೇ ಗೋಸ್ವಾಮಿ, ನನ್ನ ಪತಿ ತನ್ನ ಜೀವಕ್ಕೆ ಅಪಾಯವಿದೆ ಎಂದು ಪದೇಪದೆ ಹೇಳುತ್ತಿದ್ದರು.
ಅವರಿಗೇನಾದರೂ ಆದರೆ ಅದಕ್ಕೆ ಪೊಲೀಸರು, ಮಹಾರಾಷ್ಟ್ರ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವೇ ಜವಾಬ್ದಾರಿ ಎಂದು ಹೇಳಿದ್ದಾರೆ. ಬಿಜೆಪಿ ಮುಖಂಡ ಕಿರಿತ್ ಸೋಮಯ್ಯ ಜೈಲಿಗೆ ಧಾವಿಸಿ ಅರ್ನಬ್ಗೆ ಸೂಕ್ತ ಆರೈಕೆ ಮತ್ತು ಭದ್ರತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸ್ವಾಮಿಗೆ ಯಾವುದೇ ತೊಂದರೆ ಆಗುವುದಿಲ್ಲ, ಅಗತ್ಯವಿದ್ದರೆ ವೈದ್ಯಕೀಯ ಚಿಕಿತ್ಸೆ ಕೂಡ ನೀಡಲಾಗುವುದು ಎಂದು ಜೈಲಿಧಿಕಾರಿಗಳು ಭರವಸೆ ನೀಡಿದ್ದಾರೆ.