ಟೆಲ್ ಅವೀವ್ (ಇಸ್ರೇಲ್) : ನಿರಂತರ ವಾಯುದಾಳಿ ನಡೆಸುತ್ತಿರುವ ಇಸ್ರೇಲ್, ತನ್ನ ಭೂಸೇನೆಯನ್ನು ಗಾಜಾ ಗಡಿಯಲ್ಲಿ ಸನ್ನದ್ಧವಾಗಿ ನಿಲ್ಲಿಸಿದ್ದು, ಯಾವುದೇ ಕ್ಷಣದಲ್ಲಿ ಬೇಕಾದರೂ ದಾಳಿ ಮಾಡುವ ಸಾಧ್ಯತೆ ಇದೆ. ಆದರೆ, ಅಮೆರಿಕ ಮತ್ತು ಇಂಗ್ಲೆಂಡ್ ಭೂದಾಳಿಯನ್ನು ತಡೆ ಹಿಡಿದಿವೆ ಎಂದು ವರದಿಯಾಗಿದೆ.
ನೂರಾರು ಟ್ಯಾಂಕ್‌ಗಳು ಮತ್ತು ಶಸ್ತ್ರಸಜ್ಜಿತ ಸೈನಿಕರು ಗಾಜಾ ಗಡಿಯಲ್ಲಿ ಜಮಾಯಿಸಿದ್ದು, ಸರ್ಕಾರ ಮತ್ತು ಮಿಲಿಟರಿ ಉನ್ನತ ಅಧಿಕಾರಿಗಳ ಒಪ್ಪಿಗೆಗಾಗಿ ಕಾತೊರೆಯುತ್ತಿದೆ. ಆದರೆ, ಹಮಾಸ್ ಉಗ್ರರ ಬಳಿ ಒತ್ತೆಯಲ್ಲಿರುವ ಇಸ್ರೇಲಿಗರನ್ನು ಜೀವಂತವಾಗಿ ವಾಪಸ್ ಪಡೆಯಲು ಭೂಸೇನಾ ದಾಳಿ ಸಮಸ್ಯೆಯಾಗಬಾರದು ಎಂಬ ಕಾರಣಕ್ಕಾಗಿ ಕಾದು ನೋಡುವ ತಂತ್ರವನ್ನು ಅನುಸರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಗಾಜಾದ ಮೇಲೆ ಭೂದಾಳಿ ನಡೆದಲ್ಲಿ ಒತ್ತೆಯಾಳುಗಳನ್ನು ಹಮಾಸ್ ಉಗ್ರರು ಹತ್ಯೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಒತ್ತೆಯಾಳುಗಳ ಬಿಡುಗಡೆಗೆ ನಡೆಯುತ್ತಿರುವ ಪ್ರಯತ್ನಗಳು ವಿಫಲವಾಗಲಿದೆ ಎಂಬ ಕಾರಣಕ್ಕಾಗಿ ಅಮೆರಿಕ ಮತ್ತು ಇಂಗ್ಲೆಂಡ್ ದಾಳಿ ನಡೆಸದಂತೆ ಸೂಚಿಸಿದ್ದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ಹಿರಿಯ ರಾಜತಾಂತ್ರಿಕ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿವೆ.
ಕಾದು ನೋಡಿ ದಾಳಿ: ಯಾವುದೇ ಕ್ಷಣದಲ್ಲಿ ಬೇಕಾದರೂ ಇಸ್ರೇಲ್ ಪಡೆಗಳು ಭೂದಾಳಿ ನಡೆಸುವ ಸಾಧ್ಯತೆಯ ಹಿನ್ನೆಲೆ, ಅಮೆರಿಕ ಮತ್ತು ಇಂಗ್ಲೆಂಡ್ ದಾಳಿಯೇ ಬೇಡ ಎಂದು ಹೇಳಿಲ್ಲ. ತುಸು ಕಾದು ನೋಡುವ ಜೊತೆಗೆ ಒತ್ತೆಯಾಳುಗಳ ಬಿಡುಗಡೆಗೆ ರಾಜತಾಂತ್ರಿಕ ಪ್ರಯತ್ನಗಳನ್ನು ನಡೆಸಲು ಸಲಹೆ ನೀಡಿದೆ. ಈ ಮಧ್ಯೆ ಇಸ್ರೇಲ್ ರಕ್ಷಣಾ ಪಡೆಗಳು (IDF) ಹಮಾಸ್ ಒತ್ತೆಯಾಳಾಗಿಟ್ಟುಕೊಂಡಿದ್ದ ಇಬ್ಬರು ಅಮೆರಿಕದ ನಾಗರಿಕರನ್ನು ಬಿಡುಗಡೆ ಮಾಡಿಸಿದೆ. ಅವರು ಅಮೆರಿಕ ತಲುಪಿದ್ದು, ಅಧ್ಯಕ್ಷ ಜೋ ಬೈಡನ್ ಅವರು ಸ್ವಾಗತಿಸಿದರು.
ಇಸ್ರೇಲ್ ಮೇಲೆ ದಾಳಿಗೆ ಕಾದ ಹಿಜ್ಬುಲ್ಲಾ: ವಿಮಾನವಾಹಕ ನೌಕೆ, ವಿಮಾನಗಳು ಮತ್ತು ಹಲವಾರು ಬೆಂಗಾವಲು ಯುದ್ಧನೌಕೆಗಳನ್ನು ಇಸ್ರೇಲ್ ಗಾಜಾ ಗಡಿಯಲ್ಲಿ ನಿಲ್ಲಿಸಿದ್ದರೂ, ದಾಳಿಯನ್ನು ಆರಂಭಿಸಿಲ್ಲ. ಹಾಗೊಂದು ವೇಳೆ ಭೂದಾಳಿ ನಡೆದಲ್ಲಿ ಲೆಬನಾನ್ನಿಂದ ಹಿಜ್ಬುಲ್ಲಾ ಉಗ್ರರು ಇಸ್ರೇಲ್ ಮೇಲೆ ಆಕ್ರಮಣ ಮಾಡುವ ಯೋಜನೆಯಲ್ಲಿದ್ದಾರೆ ಎಂದು ಅಮೆರಿಕದ ಭದ್ರತಾಧಿಕಾರಿಗಳು ಮತ್ತು ಇಸ್ರೇಲ್ ಗುಪ್ತಚರ ದಳ ಹೇಳಿದೆ.
ಇದರ ಜೊತೆಗೆ ಹಮಾಸ್ ಪರವಾಗಿ ಇಸ್ರೇಲ್ ವಿರುದ್ಧ ಹೋರಾಡಿದಲ್ಲಿ ತನ್ನ ಪಡೆಗಳು ಮತ್ತು ಲೆಬನಾನ್ಗೆ ಆಗುವ ಹಾನಿಯ ಬಗ್ಗೆ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಆತಂಕ ಹೊಂದಿದ್ದು, ಇಸ್ರೇಲ್‌ನೊಂದಿಗೆ ನೇರವಾಗಿ ಯುದ್ಧವನ್ನು ಬಯಸುವುದಿಲ್ಲ ಎಂದೂ ಅಧಿಕಾರಿಗಳು ಹೇಳಿದ್ದಾಗಿ ಅಮೆರಿಕದ ಮಾಧ್ಯಮಗಳು ವರದಿ ಮಾಡಿದೆ. ಇಸ್ರೇಲ್ಗೆ ಬೆಂಬಲ ಘೋಷಿಸಿರುವ ಅಮೆರಿಕ F-15, F-16 ಫೈಟರ್ ಸ್ಕ್ವಾಡ್ರನ್‌ಗಳು ಮತ್ತು A-10 ಅಟ್ಯಾಕ್ ಸ್ಕ್ವಾಡ್ರನ್‌ಗಳನ್ನು ಐಡಿಎಫ್ಗೆ ನೀಡಿದೆ.
ಇದನ್ನೂ ಓದಿ: ಗಾಜಾ ಹಿಂಸಾಚಾರದಲ್ಲಿ ವಿಧವೆಯರಾದ 900 ಮಹಿಳೆಯರು; ವಿಶ್ವಸಂಸ್ಥೆ ಮಾಹಿತಿ