ಮಾಸ್ಕೋ (ರಷ್ಯಾ): ಭಾರತದ ರಾಜಧಾನಿ ನವದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ನಡೆಯಲಿರುವ ಜಿ20 ನಾಯಕರ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾಗವಹಿಸುತ್ತಿಲ್ಲ. ಈ ಕುರಿತು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಇಂದು (ಶುಕ್ರವಾರ) ಅಧಿಕೃತ ಘೋಷಣೆ ಮಾಡಿದ್ದಾರೆ. ''ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ. ಸದ್ಯ ವಿಶೇಷ ಮಿಲಿಟರಿ ಕಾರ್ಯಾಚರಣೆಗಳಿಗೆ ಒತ್ತು ನೀಡಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಬ್ರಿಕ್ಸ್ ಶೃಂಗಸಭೆಯಲ್ಲೂ ಪುಟಿನ್ ಭಾಗವಹಿಸಿರಲಿಲ್ಲ. ಶೃಂಗದಲ್ಲಿ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಪಾಲ್ಗೊಂಡಿದ್ದರು. ಉಕ್ರೇನಿಯನ್ ಮಕ್ಕಳನ್ನು ರಷ್ಯಾಕ್ಕೆ ಗಡಿಪಾರು ಮಾಡುವ ಆಪಾದಿತ ಯೋಜನೆಗೆ ಸಂಬಂಧಿಸಿದಂತೆ ಮಾರ್ಚ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಪುಟಿನ್ ಅವರಿಗೆ ಬಂಧನ ವಾರಂಟ್ ಹೊರಡಿಸಿತ್ತು. ದಕ್ಷಿಣ ಆಫ್ರಿಕಾ ಐಸಿಸಿಗೆ ಸಹಿ ಹಾಕಿದ್ದು, ಪುಟಿನ್ ದೇಶದಲ್ಲಿದ್ದರೆ ಬಂಧನಕ್ಕೆ ಸಹಾಯ ಮಾಡುವ ಕಾರಣದಿಂದ ದೂರ ಉಳಿದಿದ್ದರು.
ಇದನ್ನೂ ಓದಿ: ಮುಂದಿನ ತಿಂಗಳು ಭಾರತಕ್ಕೆ ಆಗಮಿಸಲಿದ್ದಾರೆ ಅಮೆರಿಕ ಅಧ್ಯಕ್ಷ ಜೋ ಬೈಡನ್
ಶೃಂಗಸಭೆಗೆ ಭರದ ಸಿದ್ಧತೆ: 2022ರ ಡಿಸೆಂಬರ್ 1ರಂದು ಇಂಡೋನೇಷ್ಯಾ ನಂತರ ಜಿ20 ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದೆ. ದೆಹಲಿಯಲ್ಲಿ ಸೆಪ್ಟೆಂಬರ್ 9 ಹಾಗೂ 10ರಂದು ಭಾರತದ ಅಧ್ಯಕ್ಷತೆಯಲ್ಲಿ ಜಿ20 ವಿಶ್ವ ನಾಯಕರ ಶೃಂಗಸಭೆ ನಡೆಯಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಭರದ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
ಉನ್ನತ ಮಟ್ಟದ ಪ್ರತಿನಿಧಿಗಳ ಆಗಮನ ಹಿನ್ನೆಲೆಯಲ್ಲಿ ಸುಗಮ ವಾಹನ ಸಂಚಾರ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ದೆಹಲಿ ಪೊಲೀಸ್ ಅಧಿಕಾರಿಗಳು ವಿಶೇಷ ವ್ಯವಸ್ಥೆಗಳನ್ನು ಮಾಡುವಲ್ಲಿ ನಿರತರಾಗಿದ್ದಾರೆ. ಜಿ20 ಶೃಂಗಸಭೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಸೆ.8, 9 ಮತ್ತು 10ರಂದು ಸಾರ್ವಜನಿಕ ರಜೆ ಘೋಷಿಸಿದೆ.
ಜಿ20 ಗುಂಪಿನಲ್ಲಿ ಭಾರತ, ಅರ್ಜೆಂಟಿನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ ಹಾಗೂ ಯುರೋಪಿಯನ್ ಒಕ್ಕೂಟ ಸದಸ್ಯತ್ವ ಹೊಂದಿವೆ. ಜಾಗತಿಕ ಮಟ್ಟದ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಈ ಸಭೆಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ಸೆ.7ರಿಂದ 10ರವರೆಗೆ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಇತ್ತೀಚಿಗೆ ಭೇಟಿಯನ್ನು ಖಚಿತಪಡಿಸಿರುವ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೀನ್ ಜೀನ್-ಪಿಯರ್, ''ಅಧ್ಯಕ್ಷ ಬೈಡನ್ ಜಿ20 ಪಾಲುದಾರ ರಾಷ್ಟ್ರಗಳೊಂದಿಗೆ ಜಾಗತಿಕ ಸಮಸ್ಯೆಗಳನ್ನು ನಿಭಾಯಿಸಲು ಜಂಟಿ ಪ್ರಯತ್ನಗಳ ಕುರಿತಂತೆ ಚರ್ಚೆ ಮಾಡಲಿದ್ದಾರೆ'' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿಗೆ ಗ್ರೀಕ್‌ನ 'ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್' ಗೌರವ