ಜಕಾರ್ತಾ: ಇಂಡೋನೇಷ್ಯಾದ ಪ್ರಮುಖ ದ್ವೀಪ ಜಾವಾದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 162 ಮಂದಿ ಮೃತಪಟ್ಟಿದ್ದು, 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.6ರಷ್ಟು ದಾಖಲಾಗಿತ್ತು. ಮೃತರಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ.
ಹಲವು ಮನೆಗಳು ಮತ್ತು ಕಟ್ಟಡಗಳು ಕುಸಿದು ಬಿದ್ದಿವೆ. ಕೆಲವರು ತಮ್ಮ ಮಕ್ಕಳೊಂದಿಗೆ ಕಣ್ಣೀರು ಹಾಕುತ್ತಾ ಮನೆಗಳಿಂದ ಓಡಿ ಬಂದರು. ಕಟ್ಟಡಗಳ ಅವಶೇಷಗಳಡಿ ಸಿಲುಕಿದವರ ಪೈಕಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಜೆದಿಲ್ ಎಂಬ ಹಳ್ಳಿಯೊಂದರಲ್ಲೇ ಸುಮಾರು 25ಕ್ಕೂ ಹೆಚ್ಚು ಜನರು ಕಟ್ಟಡಗಳ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ತಂಡಗಳು ಕುಸಿದ ಮನೆಗಳ ಅವಶೇಷಗಳಡಿ ಹೂತು ಹೋಗಿರುವವರ ಹುಡುಕಾಟ ನಡೆಸುತ್ತಿದ್ದಾರೆ. ರಕ್ಷಣಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳಿಗೆ ಆಸ್ಪತ್ರೆಗಳ ಒಳಗೆ, ಹೊರಗೆ, ಟೆರೆಸ್, ಪಾರ್ಕಿಂಗ್ ಸ್ಥಳಗಳಲ್ಲೆಲ್ಲಾ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 5 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ರಾಜಧಾನಿ ಜಕಾರ್ತಾದಿಂದ 75 ಕಿ.ಮೀ ದೂರದ ಪಶ್ಚಿಮ ಜಾವಾ ಪ್ರಾಂತ್ಯದ ಸಿಯಾಂಜುರ್ ಪ್ರದೇಶದ 10 ಕಿ.ಮೀ (6.2 ಮೈಲಿ) ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪ್ರದೇಶವು 2.5 ದಶಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆಯಾಗಿದೆ.
ಸಿಯಾಂಜೂರ್ ಸುತ್ತಮುತ್ತ ಭೂಕುಸಿತದ ವರದಿಯಾಗಿದೆ. ಇಲ್ಲಿನ ವಸತಿ ಶಾಲೆ, ಆಸ್ಪತ್ರೆ ಮತ್ತು ಇತರ ಸಾರ್ವಜನಿಕ ಕಟ್ಟಡಗಳಿಗೂ ಹಾನಿಯಾಗಿದೆ. ಮೂರು ಬಾರಿ ಭೂಮಿ ಪ್ರಬಲವಾಗಿ ಕಂಪಿಸಿತು. ಮೊದಲ ಕಂಪನದ ಅವಧಿ 10 ಸೆಕೆಂಡುಗಳು ಇತ್ತು ಎಂದು ಪ್ರತ್ಯಕ್ಷದರ್ಶಿ, ಅಂಗಡಿಯೊಂದರ ಮಾಲೀಕರಾದ ದೇವಿ ರಿಸ್ಮಾ ತಿಳಿಸಿದರು.
ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚು ಕಟ್ಟಡಗಳು ಕುಸಿದಿದ್ದು ಹಲವರು ಗಾಯಗೊಂಡಿದ್ದಾರೆ. ಸಾವು-ನೋವು ಮತ್ತು ಹಾನಿಯ ಪ್ರಮಾಣದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ಮುಖ್ಯಸ್ಥ ಸುಹಾರ್ಯಾಂಟೊ ಹೇಳಿದ್ದಾರೆ.
270 ದಶಲಕ್ಷಕ್ಕೂ ಹೆಚ್ಚು ಜನರಿರುವ ಈ ದೇಶ ಆಗಾಗ ಭೂಕಂಪ, ಜ್ವಾಲಾಮುಖಿ ಸ್ಫೋಟ ಮತ್ತು ಸುನಾಮಿಗಳಿಗೆ ತುತ್ತಾಗುತ್ತಿದೆ. ಫೆಬ್ರವರಿ 2022 ರಲ್ಲಿ, ಪಶ್ಚಿಮ ಸುಮಾತ್ರಾ ಪ್ರಾಂತ್ಯದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಘಟನೆಯಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿ 460ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಇದನ್ನೂ ಓದಿ: ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ಭೂಕಂಪ: ಸಾವಿನ ಸಂಖ್ಯೆ 46ಕ್ಕೆ ಏರಿಕೆ