ನವದೆಹಲಿ : ಈ ವರ್ಷದ ಏಪ್ರಿಲ್‌ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಎಸ್‌ಸಿಒ ಸಭೆಯಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನ ಸೇರಿದಂತೆ ಎಸ್‌ಸಿಒ ರಾಷ್ಟ್ರಗಳಿಗೆ ಭಾರತ ಆಹ್ವಾನ ಕಳುಹಿಸಿದೆ. ಆದರೆ ಪಾಕಿಸ್ತಾನದಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಹೇಳಿದ್ದಾರೆ. ಎಸ್ಸಿಓ ಎಂದು ಕರೆಯಲಾಗುವ ಶಾಂಘೈ ಸಹಕಾರ ಸಂಸ್ಥೆಗೆ ಪ್ರಸ್ತುತ ಭಾರತ ದೇಶ ಅಧ್ಯಕ್ಷನಾಗಿದೆ. ಶಾಂಘೈ ಸಹಕಾರ ಸಂಸ್ಥೆ (SCO)ಯ ರಕ್ಷಣಾ ಸಚಿವರ ಸಭೆಯು ಭಾರತದ ರಾಜಧಾನಿ ನವದೆಹಲಿಯಲ್ಲಿ ಏಪ್ರಿಲ್‌ನಲ್ಲಿ ನಡೆಯಲಿದೆ.
ಎಲ್ಲಾ ದೇಶಗಳಾದ ಚೀನಾ, ಭಾರತ, ಕಝಾಕಿಸ್ತಾನ್, ಕಿರ್ಗಿಸ್ತಾನ್, ರಷ್ಯಾ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ರಕ್ಷಣಾ ಮಂತ್ರಿಗಳಿಗೆ ರಕ್ಷಣಾ ಮಂತ್ರಿಗಳ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ಕಳುಹಿಸಲಾಗಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್ ಅವರಿಗೂ ಆಹ್ವಾನ ಕಳುಹಿಸಲಾಗಿದೆ. ನಾವು SCO ಅಧ್ಯಕ್ಷರಾಗಿದ್ದೇವೆ ಮತ್ತು ಎಲ್ಲ ಕಾರ್ಯಕ್ರಮಗಳಿಗೆ ಎಲ್ಲ SCO ಸದಸ್ಯರನ್ನು ಆಹ್ವಾನಿಸುತ್ತೇವೆ ಎಂದು ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ನಾವು ಎಸ್‌ಸಿಒ ಅಧ್ಯಕ್ಷರಾಗಿರುವ ಕಾರಣದಿಂದ ವಿವಿಧ ದೇಶಗಳಿಗೆ ಆಹ್ವಾನಗಳನ್ನು ಕಳುಹಿಸಲಾಗುತ್ತಿದೆ. ಆದರೆ, ಪಾಕಿಸ್ತಾನವು ಆಹ್ವಾನ ಸ್ವೀಕರಿಸಿದೆಯೇ ಅಥವಾ ಇಲ್ಲವೇ ಎಂಬುದು ತಿಳಿದಿಲ್ಲ. ಅಂಥ ಪ್ರತಿಯೊಂದು ಸಣ್ಣ ಮಾಹಿತಿಯನ್ನು ನಾನು ಗಮನಿಸುವುದಿಲ್ಲ ಎಂದು ಬಾಗ್ಚಿ ಹೇಳಿದರು. ಭಾರತವು ಪ್ರಸ್ತುತ ಎಸ್‌ಸಿಒ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದು, ಈ ವರ್ಷ ಸರಣಿ ಸಭೆಗಳನ್ನು ಆಯೋಜಿಸಲು ಸಜ್ಜಾಗಿದೆ. ಶಾಂಘೈ ಸಹಕಾರ ಸಂಸ್ಥೆಯು ಚೀನಾ, ಭಾರತ, ಕಝಾಕಿಸ್ತಾನ್, ಕಿರ್ಗಿಸ್ತಾನ್, ರಷ್ಯಾ, ಪಾಕಿಸ್ತಾನ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಅನ್ನು ಒಳಗೊಂಡಿದೆ.
ಮೇ ತಿಂಗಳಲ್ಲಿ ನಡೆಯಲಿರುವ SCO ವಿದೇಶಾಂಗ ಸಚಿವರ ಸಭೆಗೆ ಭಾರತವು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರಿಗೆ ಆಹ್ವಾನ ಕಳುಹಿಸಿದೆ. SCO ಒಂದು ಪ್ರಮುಖ ಪ್ರಾದೇಶಿಕ ಸಂಸ್ಥೆಯಾಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಅದರ ಸದಸ್ಯ ರಾಷ್ಟ್ರಗಳ ನಡುವೆ ಆರ್ಥಿಕ ಸಂಪರ್ಕಗಳು ಮತ್ತು ಸಹಕಾರವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಪ್ರತಿ ವರ್ಷ, SCO ತನ್ನ ಚಟುವಟಿಕೆಗಳ ಕ್ಯಾಲೆಂಡರ್ ಅನ್ನು ತಯಾರಿಸುತ್ತದೆ. ವಿದೇಶಾಂಗ ಮಂತ್ರಿಗಳ ಸಭೆಯಲ್ಲಿ ಇದನ್ನು ನಿರ್ವಹಿಸಲಾಗುತ್ತದೆ.
ಮೇ 4-5 ರವರೆಗೆ ಗೋವಾದಲ್ಲಿ ನಡೆಯಲಿರುವ ಮುಂಬರುವ ವಿದೇಶಾಂಗ ಸಚಿವರ ಸಭೆಗೆ ಪಾಕಿಸ್ತಾನ ಮತ್ತು ಚೀನಾ ಸೇರಿದಂತೆ ಎಸ್‌ಸಿಒನ ಎಲ್ಲಾ ಸದಸ್ಯರಿಗೆ ಭಾರತವು ಔಪಚಾರಿಕವಾಗಿ ಆಹ್ವಾನಗಳನ್ನು ಕಳುಹಿಸಿದೆ. ಚೀನಾದ ಹೊಸ ವಿದೇಶಾಂಗ ಸಚಿವ ಕ್ವಿನ್ ಗ್ಯಾಂಗ್ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಅವರಿಗೂ ಆಹ್ವಾನಗಳು ಹೋಗಿವೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತವು 9 ರಾಷ್ಟ್ರಗಳ ಎಸ್ಸಿಓ ಗುಂಪಿನ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದೆ ಮತ್ತು ಈ ವರ್ಷ ಪ್ರಮುಖ ಸಭೆಗಳು ಮತ್ತು ಶೃಂಗಸಭೆಗಳನ್ನು ನಡೆಸಲಿದೆ. ಪಾಕಿಸ್ತಾನದಿಂದ ಗಡಿಯಾಚೆಗಿನ ಭಯೋತ್ಪಾದನೆಯ ವಿಷಯಗಳಿಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವಿನ ಸಂಬಂಧಗಳು ಹಲವು ವರ್ಷಗಳಿಂದ ಅನಿಶ್ಚಿತವಾಗಿವೆ. ಯಾವುದೇ ಮಾತುಕತೆಯ ಮುನ್ನ ಇಸ್ಲಾಮಾಬಾದ್ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ಅನ್ನು ಮರು ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸುತ್ತಿದೆ.
ಇದನ್ನೂ ಓದಿ : ಭಾರತದ ನೆರೆ ದೇಶಗಳಿಗೆ ಸಾಲ ನೀಡುವ ಮೂಲಕ ಚೀನಾ ಹತೋಟಿ ಸಾಧಿಸಬಹುದು: ಅಮೆರಿಕಾ ಕಳವಳ