ಬರ್ಲಿನ್: ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಜರ್ಮನಿಯ ಆಸ್ಪತ್ರೆಯಿಂದ ತಮ್ಮ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಪೂರ್ತಿಯಾಗಿ ಗುಣಮುಖನಾಗಿಲ್ಲದಿದ್ದರೂ ನಾನೀಗ ವೆಂಟಿಲೇಟರ್ ಇಲ್ಲದೇ ಉಸಿರಾಡುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ.
ಆಗಸ್ಟ್ 20 ರಂದು ರಷ್ಯಾದ ವಿಮಾನದಲ್ಲಿ ಅನಾರೋಗ್ಯಕ್ಕೊಳಗಾಗಿ ಅವರನ್ನು ಬರ್ಲಿನ್‌ನ ಚರೈಟ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಇದೀಗ ಅವರ ಫೋಟೋವೊಂದನ್ನು ಹಂಚಿಕೊಂಡಿದ್ದು, "ಹಾಯ್, ಇದು ನವಲ್ನಿ" ಎಂದು ಅವರು ರಷ್ಯಾದ ಭಾಷೆಯಲ್ಲಿ ಬರೆದುಕೊಂಡಿದ್ದಾರೆ. "ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಆರೋಗ್ಯ ಸಂಪೂರ್ಣವಾಗಿ ಸುಧಾರಿಸಿಲ್ಲ, ಆದರೆ ನಿನ್ನೆ ನಾನು ಇಡೀ ದಿನ ಸ್ವತಃ ಉಸಿರಾಟ ನಡೆಸಿದೆ ಎಂದಿದ್ದಾರೆ. "ಯಾರ ಸಹಾಯವಿಲ್ಲದೇ, ವೆಂಟಿಲೇಶನ್ಗಾಗಿ ಗಂಟಲಲ್ಲಿ ಅಳವಡಿಸಿರುವ ಕವಾಟವನ್ನೂ ಬಳಸದೇ ಈಗ ಸ್ವತಂತ್ರವಾಗಿ ಉಸಿರಾಡುತ್ತಿದ್ದೇನೆ ಎಂದಿದ್ದಾರೆ.
ನವಾಲ್ನಿ ಅವರನ್ನು ಒಂದು ವಾರಕ್ಕೂ ಹೆಚ್ಚು ಕಾಲ ಕೋಮಾದಲ್ಲಿ ಇರಿಸಲಾಗಿತ್ತು. ಈಗ ಸಾಕಷ್ಟು ಸುಧಾರಿಸಿದ್ದಾರೆ. ಹೀಗಾಗಿ ಸೋಮವಾರ, ಅವರಿಗೆ ಅಳವಡಿಸಿದ್ದ ಆಸ್ಪತ್ರೆಯ ವೆಂಟಿಲೇಟರ್ ತೆಗೆಯಲಾಗಿತ್ತು. ಆದರೆ ಅವರ ಚೇತರಿಕೆಯ ಹೊರತಾಗಿಯೂ, ಅವರ ದೇಹ ಸೇರಿದ್ದ ವಿಷಕ್ಕೆ ಸಂಬಂಧಿಸಿದ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಫೋಟೋದಲ್ಲಿ, ನವಲ್ನಿ ಅವರು ಪತ್ನಿ ಯೂಲಿಯಾ ನವಲ್ನಾಯಾ ಮತ್ತು ಇಬ್ಬರು ಮಕ್ಕಳನ್ನು ಪ್ರೀತಿಯಿಂದ ಆಲಂಗಿಸಿಕೊಂಡಿದ್ದಾರೆ.