ಇಸ್ಲಾಮಾಬಾದ್ (ಪಾಕಿಸ್ತಾನ): ಆಲ್ ಖೈದಾ ಉಗ್ರಗಾಮಿ ಸಂಘಟನೆಯಿಂದ ಹಣ ಪಡೆಯುತ್ತಿದ್ದಾಗಿ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್ ಬಣ) ಪಕ್ಷ ಪಾಕ್ ಚುನಾವಣಾ ಆಯೋಗದ ಮುಂದೆ ಒಪ್ಪಿಕೊಂಡಿದೆ ಎಂದು ರೈಲ್ವೆ ಇಲಾಖೆಯ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಫಕ್ರು ಹಬೀಬ್ ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನ ತೆಹ್ರಿಕ್ ಇ ಇನ್ಸಾಫ್ ಪಕ್ಷದ ನಾಯಕ ಫಕ್ರು ಹಬೀಬ್, ಪಿಎಂಎಲ್-ಎನ್ ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ತಮ್ಮ ಪಕ್ಷಕ್ಕೆ ದೇಣಿಗೆ ನೀಡುತ್ತಿದ್ದವರ ಕುರಿತು ಸಂಪೂರ್ಣವಾಗಿ ವಿವರ ನೀಡಲು ವಿಫಲವಾಗಿವೆ ಎಂದು ಆರೋಪಿಸಿದ್ದಾರೆ.
ಇದರ ಜೊತೆಗೆ ಜಮೈತ್ ಉಲೇಮಾ-ಇ-ಇಸ್ಲಾಂ- ಫಜ್ಲ್ ವಿರುದ್ಧ ಫಕ್ರು ಹಬೀಬ್ ವಾಗ್ದಾಳಿ ನಡೆಸಿದ್ದು, ಆ ಪಕ್ಷದ ಮುಖ್ಯಸ್ಥನಾದ ಮೌಲಾನಾ ಫಜ್ಲುರ್ ರೆಹಮಾನ್ ಲಿಬಿಯಾ ಮತ್ತು ಇರಾಕ್ನಿಂದ ಹಣ ಪಡೆಯುತ್ತಿದ್ದರೆಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಬೆನ್ನು ಮೂಳೆ ಭದ್ರವಾಗಿಲ್ಲ : ಟಾಂಗ್ ಕೊಟ್ಟ ರಮ್ಯಾ
ಕೆಲ ದಿನಗಳ ಹಿಂದೆ ಅಮೆರಿಕಗೆ ಪಾಕ್ನಿಂದ ಮಾಜಿ ರಾಯಭಾರಿಯಾಗಿದ್ದ ಅಬಿದಾ ಹುಸೇನ್ ಒಸಾಮಾ ಬಿನ್ ಲಾಡೆನ್ ಪಾಕ್ನ ಮಾಜಿ ಪ್ರಧಾನಿ ನವಾಜ್ ಷರೀಫ್ಗೆ ಬೆಂಬಲದ ಜೊತೆಗೆ ಹಣಕಾಸಿನ ನೆರವು ನೀಡುತ್ತಿದ್ದರು ಎಂದು ಆರೋಪಿಸಿದ್ದರು.
ಪಾಕಿಸ್ತಾನದ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ಅಬಿದಾ ಹುಸೇನ್ ಈ ರೀತಿಯಾಗಿ ಹೇಳಿದ್ದಾರೆಂದು ಉಲ್ಲೇಖಿಸಿದ್ದು, ಒಂದು ಸಮಯದಲ್ಲಿ ಒಸಾಮಾ ಬಿನ್ ಲಾಡೆನ್ ನವಾಜ್ ಷರೀಫ್ ಅವರನ್ನು ಬೆಂಬಲಿಸಿದ್ದರು. ಜೊತೆಗೆ ಹಣಕಾಸಿನ ನೆರವನ್ನೂ ನೀಡುತ್ತಿದ್ದರು ಎಂದು ಹೇಳಿತ್ತು.
ನವಾಜ್ ಷರೀಫ್ ಅವರ ಸರ್ಕಾರದ ಅವಧಿಯಲ್ಲಿ ಕ್ಯಾಬಿನೆಟ್ ಸದಸ್ಯರೂ ಆಗಿದ್ದ ಅಬಿದಾ, ಒಂದು ಕಾಲದಲ್ಲಿ ಬಿನ್ ಲಾಡೆನ್ ಜನಪ್ರಿಯರಾಗಿದ್ದರು ಮತ್ತು ಅಮೆರಿಕನ್ನರು ಸೇರಿದಂತೆ ಎಲ್ಲರೂ ಲಾಡೆನ್ನನ್ನು ಇಷ್ಟಪಟ್ಟಿದ್ದರು. ಆದರೆ ಕಾಲಾಂತರದಲ್ಲಿ ಅವರನ್ನು ಅಪರಿಚಿತರು ಎಂಬಂತೆ ಇಲ್ಲಿನ ಸರ್ಕಾರ ಪರಿಗಣಿಸಿತು ಎಂದು ಹೇಳಿದ್ದರು.