ಲಾಹೋರ್(ಪಾಕಿಸ್ತಾನ): ಆನ್ಲೈನ್ ಗೇಮ್ ಪಬ್ಜಿಯಿಂದ ಈಗಾಗಲೇ ಅನೇಕ ಅನಾಹುತಗಳು ಸಂಭವಿಸಿವೆ. ಇದೀಗ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಪಾಕಿಸ್ತಾನದ ಲಾಹೋರ್ನಲ್ಲಿ PUBG ಪ್ರಭಾವಕ್ಕೊಳಗಾಗಿದ್ದ 14 ವರ್ಷದ ಬಾಲಕನೋರ್ವ ಇಡೀ ಕುಟುಂಬವನ್ನೇ ಗುಂಡಿಕ್ಕಿ ಕೊಂದಿದ್ದಾನೆ.
ತನ್ನ ತಾಯಿ, ಇಬ್ಬರು ಅಪ್ರಾಪ್ತ ಸಹೋದರಿಯರನ್ನ ಸೇರಿದಂತೆ ಇಡೀ ಕುಟುಂಬವನ್ನೇ ಗುಂಡಿಕ್ಕಿ ಕೊಂದಿದ್ದಾನೆಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಳೆದ ವಾರ ಈ ಘಟನೆ ನಡೆದಿದ್ದು, 45 ವರ್ಷದ ನಹಿದ್, 22 ವರ್ಷದ ತೈಮೂರ್, 17 ಮತ್ತು 11 ವರ್ಷದ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ. ಘಟನೆಯಲ್ಲಿ ತಾಯಿ ಸಹ ಸಾವನ್ನಪ್ಪಿದ್ದಾಳೆಂದು ತಿಳಿದು ಬಂದಿದೆ.
ಇದನ್ನೂ ಓದಿರಿ: ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ವಿ. ಅನಂತ ನಾಗೇಶ್ವರನ್ ನೇಮಕ
ಬಾಲಕ ಅಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸುವ ಬದಲಾಗಿ PUBG ಆಡುವುದರಲ್ಲೇ ಕಳೆಯುತ್ತಿದ್ದನು ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕಾಗಿ ಬಾಲಕನ ತಾಯಿ ಆತನನ್ನ ಮೇಲಿಂದ ಮೇಲೆ ತರಾಟೆಗೆ ತೆಗೆದುಕೊಳ್ಳುತ್ತಿದ್ದರಂತೆ.
ಇದೀಗ ಬಾಲಕ ಖುದ್ದಾಗಿ ತನ್ನ ಕುಟುಂಬವನ್ನ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಅಲ್ಲಿನ ಪತ್ರಿಕೆ ತಿಳಿಸಿರುವ ಪ್ರಕಾರ ಲಾಹೋರ್ನಲ್ಲಿ PUBGಯಿಂದಾಗಿ ನಡೆದ ನಾಲ್ಕನೇ ಅಪರಾಧ ಕೃತ್ಯ ಇದಾಗಿದೆ.
2020ರಲ್ಲಿ ಸಹ ಇದೇ ರೀತಿಯ ಕೃತ್ಯಗಳು ನಡೆದಿವೆ. PUBG ಗೀಳಿನಿಂದಾಗಿ ಭಾರತದಲ್ಲೂ ಅನೇಕ ಅನಾಹುತಗಳು ಸಂಭವಿಸಿದ್ದು, ಇದೇ ಕಾರಣಕ್ಕಾಗಿ ಈ ಆನ್ಲೈನ್ ಗೇಮ್ ಬ್ಯಾನ್ ಮಾಡಲಾಗಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ