ಬೀಜಿಂಗ್ (ಚೀನಾ): ಚೀನಾದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಂತು ಎಂದುಕೊಂಡ ಬೆನ್ನೆಲ್ಲೇ ಮತ್ತೆ ಹೊಸದಾಗಿ 55 ಪ್ರಕರಣ ಪತ್ತೆಯಾಗಿವೆ. ಈ ಕುರಿತು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ವರದಿ ಬಿಡುಗಡೆ ಮಾಡಿದೆ.
55ರಲ್ಲಿ 54 ವಿದೇಶಗಳಿಂದ ಚೀನಾಕ್ಕೆ ಬಂದ ಜನರಲ್ಲಿ ಸೋಂಕು ದೃಢಪಟ್ಟಿದೆ. ವಿಶೇಷ ಏನೆಂದರೆ ಡಿಸೆಂಬರ್‌ನಲ್ಲಿ ವೈರಸ್ ಪತ್ತೆಯಾದ ಮಧ್ಯ ಚೀನಾದ ಪ್ರಾಂತ್ಯದ ರಾಜಧಾನಿ ವುಹಾನ್‌ನಲ್ಲಿ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ.
ಇತ್ತೀಚೆಗೆ ಚೀನಾದಲ್ಲಿ ದೇಶೀಯ ಪ್ರಕರಣಗಳ ಸಂಖ್ಯೆ ಕ್ಷೀಣಿಸಿತ್ತು. ಪ್ರಸ್ತುತ ವಿದೇಶದಿಂದ ಬರುತ್ತಿರುವವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ನಾಳೆ ಅಂದರೆ ಶನಿವಾರದಿಂದ ಎಲ್ಲಾ ವಿದೇಶಿ ಪ್ರಜೆಗಳಿಗೆ ನಿರ್ಬಂಧ ಹೇರಲಾಗುವುದು(ಪರವಾನಗಿ ಹೊಂದಿರುವವರು ಸೇರಿ) ಎಂದು ವಿದೇಶಾಂಗ ಸಚಿವಾಲಯ ಘೋಷಿಸಿದೆ. ಎಲ್ಲಾ ವೀಸಾಗಳನ್ನು ಸಹ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗುತ್ತದೆ ಎಂದೂ ತಿಳಿಸಿದೆ.
ರಾಜತಾಂತ್ರಿಕ ನೌಕರರಿಗೆ ವಿನಾಯಿತಿ ನೀಡಲಾಗುವುದು. ಅಗತ್ಯ ಆರ್ಥಿಕ, ವ್ಯಾಪಾರ, ವೈಜ್ಞಾನಿಕ ಅಥವಾ ತಾಂತ್ರಿಕ ಚಟುವಟಿಕೆಗಳಿಗಾಗಿ ಅಥವಾ ತುರ್ತು ಮಾನವೀಯ ಅಗತ್ಯಗಳಿಗಾಗಿ ಚೀನಾಕ್ಕೆ ಬರುವ ವಿದೇಶಿ ಪ್ರಜೆಗಳು ವೀಸಾಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಸಚಿವಾಲಯ ತಿಳಿಸಿದೆ.
ಬೀಜಿಂಗ್ ಪ್ರಾಂತ್ಯ ಸೇರಿ ಸ್ಥಳೀಯ ಪ್ರದೇಶಗಳಲ್ಲಿ 5 ಮಂದಿ ಮೃತಪಟ್ಟಿದ್ದಾರೆ. 49 ಶಂಕಿತ ಪ್ರಕರಣ ಪತ್ತೆಯಾಗಿವೆ. ಇದರ ಮಧ್ಯೆ ಆಶಾದಾಯಕ ಎಂಬಂತೆ ಕೊರೊನಾದಿಂದ ಗುಣಮುಖರಾದ 537 ರೋಗಿಗಳನ್ನು ಆಸ್ಪತ್ರೆಯಿಂದಲೇ ಬಿಡುಗಡೆ ಮಾಡಲಾಗಿದೆ. ಚೀನಾದಲ್ಲಿ ಈವರೆಗೂ 3,174 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.