ವಾಷಿಂಗ್ಟನ್ (ಯುಎಸ್ಎ): ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗಳು, ಲೋಕೋಪಕಾರಿ ಸಂಸ್ಥೆಗಳು ಮತ್ತು ಇತರ ಕಂಪನಿಗಳು ಯುನೈಟೆಡ್ ಸ್ಟೇಟ್ಸ್ನಲ್ಲಿ ಹೊಸ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ಕೊರೊನಾದಿಂದ ಚೇತರಿಸಿಕೊಂಡಿರುವವರು ತಮ್ಮ ಪ್ಲಾಸ್ಮಾವನ್ನು ದಾನ ಮಾಡಲು ಪ್ರೇರೇಪಿಸುವ ಅಭಿಯಾನ ಇದಾಗಿದೆ.
'ದಿ ಫೈಟ್ ಈಸ್ ಇನ್ ಅಸ್' ಎಂಬ ಹೆಸರಿನ ಈ ಅಭಿಯಾನವು ತಮ್ಮ ರಕ್ತದಲ್ಲಿರುವ ಪ್ಲಾಸ್ಮಾವನ್ನು ದಾನ ಮಾಡಲು ಕೊರೊನಾದಿಂದ ಗುಣಮುಖರಾದ ದೇಶದ ಸಾವಿರಾರು ಜನರನ್ನು ಸಜ್ಜುಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಕೊರೊನಾದಿಂದ ಬದುಕುಳಿದವರು ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರತಿಕಾಯವನ್ನು ತಮ್ಮ ರಕ್ತದ ಪ್ಲಾಸ್ಮಾದಲ್ಲಿ ಹೊಂದಿರುತ್ತಾರೆ. ಸೂಪರ್ ಹೀರೋ ಸ್ವಯಂ ಸೇವಕರು ತಮ್ಮ ರಕ್ತದ ಪ್ಲಾಸ್ಮಾವನ್ನು ದಾನ ಮಾಡಲು ಮತ್ತು ಕೊರೊನಾವನ್ನು ತಡೆಗಟ್ಟಲು ಸಹಾಯ ಮಾಡುವ ಸಮಯ ಇದು ಎಂದು ಸರ್ವೈವರ್ ಕಾರ್ಪ್ಸ್ ಸಂಸ್ಥಾಪಕರಾದ ಡಯಾನಾ ಬೆರೆಂಟ್ ತಮ್ಮ ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.
ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಗಳು ತಾವು ಪ್ಲಾಸ್ಮಾ ದಾನ ಮಾಡಲು ಸಮರ್ಥರೇ ಎಂಬುದನ್ನು ತಿಳಿಯಲು TheFightIsInUs.org ಗೆ ಭೇಟಿ ನೀಡಬಹುದು.
ಅಭಿಯಾನದ ಭಾಗವಾಗಿ, ಕೊರೊನಾ ವಿರುದ್ಧದ ಹೋರಾಟದಲ್ಲಿ ದಾನ ಮಾಡಿದ ಪ್ಲಾಸ್ಮಾವನ್ನು ಬಳಸಿಕೊಳ್ಳಲು ಎರಡು ವಿಭಿನ್ನ ವಿಧಾನಗಳನ್ನು ಬಳಸಲಾಗುತ್ತಿದೆ. ಮೊದಲ ವಿಧಾನವು ಪ್ಲಾಸ್ಮಾದ ನೇರ ವರ್ಗಾವಣೆಯಾಗಿದ್ದರೆ. ಎರಡನೆಯ ವಿಧಾನವು ಹೈಪರ್‌ಇಮ್ಯೂನ್ ಗ್ಲೋಬ್ಯುಲಿನ್ (H-Ig) ಎಂದು ಕರೆಯಲ್ಪಡುವ ಔಷಧೀಯ ಅಭಿವೃದ್ಧಿಗೆ ಬಳಸಲಾಗುತ್ತದೆ. ಇದನ್ನು ಈ ವರ್ಷದ ಕೊನೆಯಲ್ಲಿ ಕ್ಲಿನಿಕಲ್ ಪರೀಕ್ಷೆಗಳಿಗೆ ನಿಗದಿಪಡಿಸಲಾಗಿದೆ.
ಯುಎಸ್ನಲ್ಲಿ ಈ ಅಭಿಯಾನವನ್ನು ಪ್ರಾರಂಭಿಸಲಾಗಿದ್ದು, ಒಕ್ಕೂಟವು ಅದನ್ನು ಯುರೋಪಿಗೆ ವಿಸ್ತರಿಸಲು ಯೋಜಿಸಿದೆ.