ಮಪುಟೊ: ಜಲಚರ ತಿನಿಸುಗಳಿಗೆ ಖ್ಯಾತಿ ಪಡೆದಿರುವ ಪೂರ್ವ ಆಫ್ರಿಕಾದ ಮೊಜಾಂಬಿಕ್ ದೇಶವು ಇಡಾಯ್ ಚಂಡಮಾರುತಕ್ಕೆ ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ನೆರೆಯ ದೇಶದ ಕೂಗಿಗೆ ಭಾರತ ಸ್ಪಂದಿಸಿದೆ.
ಮೊಜಾಂಬಿಕ್ನ ಬೈರಾ ರಾಜ್ಯವು ಸಂಪೂರ್ಣ ನುಚ್ಚು ನೂರಾಗಿದೆ. ಈವರೆಗೆ 84 ಜನರ ಸಾವಿನ ಸುದ್ದಿಯಷ್ಟೇ ಖಚಿತಪಟ್ಟಿದ್ದು ಅಲ್ಲಿನ ಅಧ್ಯಕ್ಷರು ಸಾವಿರ ಮಂದಿ ಸಾವಿಗೀಡಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ನೆರವು ಬೇಕು ಎಂಬ ಪೂರ್ವ ಆಫ್ರಿಕಾ ದೇಶದ ಕರೆಗೆ ಓಗೊಟ್ಟ ಭಾರತ ತನ್ನ ನೌಕಾಪಡೆಯನ್ನು ಬಳಸಿ ಮೊಜಾಂಬಿಕ್ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರನ್ನು ರಕ್ಷಿಸಲು ಮುಂದಾಗಿದೆ. ಬೈರಾ ಪಟ್ಟಣದಲ್ಲಿ ಅಪಾಯಕ್ಕೆ ಸಿಲುಕಿದ್ದ ಐದು ಸಾವಿರ ಮಂದಿಯನ್ನು ತನ್ನ ನೌಕೆ ಮೂಲಕ ಭಾರತ ರಕ್ಷಿಸಿದೆ.
ಸಂಕಷ್ಟಕ್ಕೆ ಸಿಲುಕಿರುವ ದೇಶಕ್ಕೆ ಅಗತ್ಯವಿರುವ ಮೀನುಗಾರಿಕಾ ದೋಣಿಗಳನ್ನು ಭಾರತವು ಒದಗಿಸುತ್ತಿದ್ದು, ಅಗತ್ಯ ಬಿದ್ದರೆ ಹೆಲಿಕಾಪ್ಟರ್ ನೆರವನ್ನೂ ಕೂಡ ಕೊಡುವುದಾಗಿ ಹೇಳಿದೆ.
ದಕ್ಷಿಣ ಹಿಂದೂಮಹಾ ಸಾಗರದತ್ತ ಹೊರಟಿದ್ದ ಭಾರತೀಯ ನೌಕಾಪಡೆಯ ಸುಜಾತಾ, ಸಾರಥಿ ಹಾಗೂ ಶಾರ್ದುಲ್ ನೌಕೆಗಳ ಮಾರ್ಗ ಬದಲಿಸಿ ಮೊಜಾಂಬಿಕ್ ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.