ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ. ಲೀಲಾವತಿ ಶುಕ್ರವಾರ ಸಂಜೆ ವಿಧಿವಶರಾಗಿದ್ದಾರೆ. ಇಂದು ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು, ಅಭಿಮಾನಿಗಳು, ರಾಜಕೀಯ ಗಣ್ಯರು ಹಾಗೂ ಸಿನಿಮಾ ತಾರೆಯರು ದರ್ಶನ ಪಡೆಯುತ್ತಿದ್ದಾರೆ. ನಟರಾದ ಸಾಧುಕೋಕಿಲ, ದ್ವಾರಕೀಶ್, ರಮೇಶ್ ಅರವಿಂದ್ ಅಂತಿಮ ದರ್ಶನ ಪಡೆದು ಲೀಲಾವತಿ ಅವರನ್ನು ನೆನೆದರು.
ನಟ ಹಾಗೂ ಸಂಗೀತ ನಿರ್ದೇಶಕ ಸಾಧುಕೋಕಿಲ ಮಾತನಾಡಿ, "ಕನ್ನಡ ಕೋಗಿಲೆ ಕಾರ್ಯಕ್ರಮದಲ್ಲಿ ತಾಯಿ ಬಗ್ಗೆ ಹಾಡಿದ್ದೆ. ನಾನು ಅವತ್ತು ಹಠ ಮಾಡಿ ಕರೆಸಿದ್ದೆ. ಲೀಲಾವತಿ ಒಬ್ಬ ಹೃದಯವಂತೆ. ವಿನೋದ್ಗೆ ಲೀಲಾವತಿ ಪಾಠ ಹೇಳುತ್ತಿದ್ದರು. ಅವೆಲ್ಲ ನಮಗೂ ಪಠ್ಯ ಪುಸ್ತಕ ಆಗಬೇಕು. ಲೀಲಾವತಿ ಅಮ್ಮನವರಿಗೆ ಶಾಂತಿ ಸಿಗಲಿ" ಎಂದು ಹೇಳಿದರು.
ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿ: "ಕೊನೆ ದಿನಗಳಲ್ಲಿ ನಾವು ಅವರ ಮನೆಗೆ ಹೋಗಿದ್ದೆವು. ಪುಟ್ಟ ಮಕ್ಕಳಂತೆ ನಟನೆ ಮಾಡುತ್ತಿದ್ದೆವು. ಊಟದ ವ್ಯವಸ್ಥೆ ಮಾಡಿ, ನಮ್ಮ ಜೊತೆ ಅವರಿದ್ರು. ಆ ದಿನಗಳನ್ನು ನೋಡಿದರೆ ತುಂಬಾ ಖುಷಿ ಆಗುತ್ತಿತ್ತು. ಲೀಲಮ್ಮ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿ. ಅವರು ಮಾಡಿದ ಪಾತ್ರ ಬಹಳ ಶ್ರೇಷ್ಠವಾದದ್ದು. ಬರೀ ನಾಯಕಿ ಪಾತ್ರವಲ್ಲ, ಪೋಷಕ ಪಾತ್ರಗಳೂ ಶ್ರೇಷ್ಠವಾದದ್ದು. ರಾಜ್ - ಲೀಲಾವತಿ ಜೋಡಿ ಶ್ರೇಷ್ಠವಾದ ಜೋಡಿ. ಅವರಂತಹ ಜೋಡಿ ಮತ್ತೆ ಚಿತ್ರರಂಗ ಕಂಡಿಲ್ಲ. ಅವರು ಅಭಿನಯಿಸಿದ ಚಿತ್ರಗಳು ಜನಪ್ರಿಯವಾಗಿದ್ದವು. ವಿನೋದ್ ಮತ್ತು ಲೀಲಾವತಿ ಅವರಂತಹ ತಾಯಿ ಮಗನನ್ನು ನಾನೆಂದೂ ನೋಡಿಲ್ಲ. ಯಾವತ್ತೂ ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ" ಎಂದು ಲೀಲಾವತಿ ಅವರನ್ನು ನೆನೆದು ಹಿರಿಯ ನಟ ದ್ವಾರಕೀಶ್ ಭಾವುಕರಾದರು.
ನಟ ರಮೇಶ್ ಅರವಿಂದ್ ಮಾತನಾಡಿ, "500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಲೀಲಾವತಿ ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಇದ್ದವರು. ವಯಸ್ಸಾಗಿದ್ದರೂ ಕೂಡ ಅವರಿಗೆ ಇದ್ದ ಉತ್ಸಾಹ ನೋಡಿ ನನಗೆ ಅಚ್ಚರಿಗೆ ಆಗ್ತಿತ್ತು. ಅವರು ಹೇಳಿದ ಮಾತುಗಳು ನನಗೆ ಈಗಲೂ ನೆನಪಾಗುತ್ತವೆ. ನನ್ನ ಜೀವನದಲ್ಲಿ ತುಂಬಾ ನೋವನ್ನು ಕಂಡಿದ್ದೇನೆ. ಅದರೆ ನನ್ನ ಸಿನಿಮಾ ನೋಡಿ ಜನರು ತಟ್ಟುವ ಚಪ್ಪಾಳೆ ನನಗೆ ಎಲ್ಲಾ ನೋವನ್ನು ಮರೆಸುತ್ತದೆ ಎಂದು ಲೀಲಾವತಿ ಅಮ್ಮನವರು ಹೇಳುತ್ತಿದ್ದರು. ಈಗ ಲೀಲಾವತಿ ಅಮ್ಮನವರು ನಮ್ಮ ಜೊತೆ ಇಲ್ಲ. ಆದರೆ ಅವರ ಕೆಲಸಗಳನ್ನು ಅವರ ಮಗ ವಿನೋದ್ ರಾಜ್ ಮುಂದುವರೆಸಿಕೊಂಡು ಹೋಗಬೇಕು. ಅವರಿಗೆ ಧೈರ್ಯವನ್ನು ಆ ದೇವರು ಕೊಡಲಿ" ಎಂದು ಪ್ರಾರ್ಥಿಸಿದರು.
ಹಿರಿಯ ನಿರ್ದೇಶಕ ಎಸ್. ನಾರಾಯಣ್, ಹಿರಿಯ ಪೋಷಕ ನಟಿ ಲಕ್ಷ್ಮೀ ದೇವಿ, ಯುವ ನಟ ನವೀನ್ ಶಂಕರ್, ನಟಿ ಪಾವನ ಗೌಡ, ನಟಿ ಭವ್ಯ, ನಟ ರಮೇಶ್ ಭಟ್, ನಿರ್ದೇಶಕ ಎಸ್.ವಿ ರಾಜೇಂದ್ರ ಸಿಂಗ್ ಬಾಬು, ನಟ ಸೃಜನ್ ಲೋಕೇಶ್, ನಿರ್ದೇಶಕ ಟಿ.ಎಸ್ ನಾಗಾಭರಣ, ಪೋಷಕ ಕಲಾವಿದರಾದ ಶಿವಕುಮಾರ್ ಹಾಗು ಪತ್ನಿ ರಕ್ಷಾ, ನಟ ರಮೇಶ್ ಅರವಿಂದ್, ಪೋಷಕ ಕಲಾವಿದೆ ರೇಖಾದಾಸ್, ಹಿರಿಯ ನಟಿ ಶೈಲಶ್ರೀ ಸೇರಿದಂತೆ ಅನೇಕ ಚಿತ್ರ ಕಲಾವಿದರು ಲೀಲಾವತಿಯರ ಅಂತಿಮ ದರ್ಶನ ಪಡೆದರು.
ಇದನ್ನೂ ಓದಿ: ಹಿರಿಯ ನಟಿಯ ಅಂತಿಮ ದರ್ಶನ: ಅಮ್ಮನನ್ನು ಮತ್ತೆ ನೆನೆದ ಸುಧಾರಾಣಿ, ಶೃತಿ, ಮಾಳವಿಕಾ