ಮುಂಬೈ (ಮಹಾರಾಷ್ಟ್ರ): ಜಾಲತಾಣದಲ್ಲಿ ತಮ್ಮ ಬೆತ್ತಲೆ ಫೋಟೋ ಪೋಸ್ಟ್ ಮಾಡಿ ವಿವಾದವನ್ನು ಮೈಮೇಲೆಳೆದುಕೊಂಡಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಇಂದು ತನಿಖಾಧಿಕಾರಿ ಮುಂದೆ ಹಾಜರಾಗಿ ತಮ್ಮ ಹೇಳಿಕೆ ನೀಡಿದ್ದಾರೆ.
ಸರ್ಕಾರೇತರ ಸಂಸ್ಥೆಯ (ಎನ್‌ಜಿಒ) ಪದಾಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಕಳೆದ ತಿಂಗಳು ಇಲ್ಲಿನ ಚೆಂಬೂರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಆಗಸ್ಟ್ 22 ರಂದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಲಾಗಿತ್ತು. ಹಲವು ಪ್ರಾಜೆಕ್ಟ್ಗಳಲ್ಲಿ ಬ್ಯೂಸಿಯಾಗಿದ್ದ ರಣವೀರ್ ಸಿಂಗ್ ಅಂದು ವಿಚಾರಣೆಗೆ ಗೈರಾಗಿದ್ದರು. ಅಲ್ಲದೇ ಎರಡು ವಾರಗಳ ಕಾಲ ಸಮಯಾವಕಾಶ ಬೇಕೆಂದು ಪೊಲೀಸರಿಗೆ ಪತ್ರದ ಮೂಲಕ ಮನವಿ ಮಾಡಿದ್ದರು.
ಅದರಂತೆ, ಇಂದು ಬೆಳಗ್ಗೆ 7 ಗಂಟೆಗೆ ತನಿಖಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ಅಲ್ಲದೇ ಕೇಳಲಾದ ಪ್ರಶ್ನೆಗಳಗೆ ಉತ್ತರಿಸಿ ಬೆಳಗ್ಗೆ 9.30 ರ ಸುಮಾರಿಗೆ ಪೊಲೀಸ್ ಠಾಣೆಯಿಂದ ನಿರ್ಗಮಿಸಿದ್ದಾರೆ. ಅಗತ್ಯವಿದ್ದರೆ ಮತ್ತೆ ಕರೆಯಲಾಗುವುದೆಂದು ಸೂಚನೆ ಕೊಡಲಾಗಿದೆ ಎಂದು ತನಿಖಾಧಿಕಾರಿ ಮಾಹಿತಿ ನೀಡಿದರು.
ರಣವೀರ್ ಸಿಂಗ್ ತಮ್ಮ ಬೆತ್ತಲೆ ಫೋಟೋಶೂಟ್ ಮಾಡಿಸಿಕೊಳ್ಳುವ ಮೂಲಕ ಮಹಿಳೆಯರ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ದೂರುದಾರರು ಆಕ್ಷೇಪ ವ್ಯಕ್ತಪಡಿಸಿದ್ದರು. ಪೊಲೀಸರು ನಟನ ವಿರುದ್ಧ ಭಾರತೀಯ ದಂಡ ಸಂಹಿತೆಯ 292 (ಅಶ್ಲೀಲ ಪ್ರಕರಣ), 293 (ಯುವಕರಿಗೆ ಅಶ್ಲೀಲ ವಸ್ತುಗಳ ಮಾರಾಟ), 509 (ಪದ, ಸನ್ನೆ ಅಥವಾ ಉದ್ದೇಶದ ಕ್ರಿಯೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ: ಗ್ರಾಹಕರಿಗೆ ಭರ್ಜರಿ ಗಿಫ್ಟ್ ನೀಡಿದ ಅಂಬಾನಿ: ದೀಪಾವಳಿಗೆ ಸಿಗಲಿದೆ ಕೈಗೆಟಕುವ ದರದಲ್ಲಿ 5G ಸೇವೆ