'ರೈಡರ್' ಚಿತ್ರದ ಬಳಿಕ ನಟ ನಿಖಿಲ್ ಕುಮಾರಸ್ವಾಮಿ ರಾಜಕೀಯದಲ್ಲಿ ಬ್ಯುಸಿಯಾಗಿದ್ದರು. ಬಳಿಕ ಅವರ ಮುಂದಿನ ಸಿನಿಮಾ ಯಾವುದು? ಎಂಬ ಕುತೂಹಲ ಅಭಿಮಾನಿ ವಲಯದಲ್ಲಿತ್ತು. ಈ ಪ್ರಶ್ನೆಗೆ ಯುವರಾಜ ಕೊನೆಗೂ ಉತ್ತರ ಕೊಟ್ಟಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಜೊತೆ ನಿಖಿಲ್ ಕುಮಾರಸ್ವಾಮಿ ಅವರ ಹೆಸರಿಡದ ಹೊಸ ಚಿತ್ರ ಅನೌನ್ಸ್ ಆಗಿದೆ. ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿತು.
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಕಾರ್ಯಕ್ರಮಕ್ಕೆ ಆಗಮಿಸಿ ದೀಪ ಬೆಳಗಿಸುವ ಮೂಲಕ ಮೊಮ್ಮಗನ ಹೊಸ ಚಿತ್ರಕ್ಕೆ ಸಾಥ್ ನೀಡಿದರು. ಬಳಿಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಈ ಹೆಸರಿಡದ ಸಿನಿಮಾಗೆ ಯುವ ನಿರ್ದೇಶಕ ಲಕ್ಷ್ಮಣ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಕನ್ನಡ ಚಿತ್ರವಿದು. ನಿಖಿಲ್ಗೆ ನಾಯಕಿಯಾಗಿ ಯುಕ್ತಿ ತರೇಜ ನಟಿಸಲಿದ್ದಾರೆ.
ಈ ವೇಳೆ ಮೊದಲು ಮಾತು ಶುರುಮಾಡಿದ ನಿಖಿಲ್ ಕುಮಾರಸ್ವಾಮಿ, "ಈ ಹಿಂದೆ 'ಸೀತಾರಾಮ ಕಲ್ಯಾಣ' ಚಿತ್ರದ ಆಡಿಯೋ ಬಿಡುಗಡೆಗೆ ಸಮಾರಂಭಕ್ಕೆ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯ ಸುಭಾಸ್ಕರನ್ ಆಗಮಿಸಿದ್ದರು. ನಮ್ಮ ಸಂಸ್ಥೆಯ ನಿರ್ಮಾಣದ ಚಿತ್ರದಲ್ಲಿ ನೀವು ನಾಯಕನಾಗಿ ನಟಿಸಬೇಕು ಎಂದು ಹೇಳಿದ್ದರು. ಅದರಂತೆ ಈಗ ಚಿತ್ರ ಆರಂಭವಾಗುತ್ತಿದೆ. ಈ ಸಿನಿಮಾಕ್ಕಾಗಿ ನಿರ್ದೇಶಕರು ಒಂದು ವರ್ಷದಿಂದ ಬೆಂಗಳೂರಿನಲ್ಲೇ ಇದ್ದು ಕೆಲಸ ಮಾಡುತ್ತಿದ್ದಾರೆ. ಸದ್ಯದಲ್ಲೇ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡಲಿದ್ದೇವೆ" ಎಂದು ತಿಳಿಸಿದರು.
ನಂತರ ತಮ್ಮ ತಂಡವನ್ನು ಪರಿಚಯಿಸುತ್ತಾ ಮಾತು ಪ್ರಾರಂಭಿಸಿದ ನಿರ್ದೇಶಕ ಲಕ್ಷ್ಮಣ್, "ಕನ್ನಡದಲ್ಲಿ ಇದು ನನ್ನ ಮೊದಲ ಚಿತ್ರ. ನಾನು ಬರೆದ ಕಥೆಯನ್ನು ಒಪ್ಪಿ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ನಿರ್ಮಾಪಕರಿಗೆ ಹಾಗೂ ನಾಯಕ ನಿಖಿಲ್ ಕುಮಾರಸ್ವಾಮಿ ಅವರಿಗೆ ಧನ್ಯವಾದಗಳು. ಒಳ್ಳೆಯ ತಂಡದೊಂದಿಗೆ ಒಳ್ಳೆಯ ಚಿತ್ರ ನೀಡುವ ನಂಬಿಕೆ ಇದೆ. ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಹೆಚ್ಚಿನ ವಿವರಣೆ ನೀಡುತ್ತೇನೆ. ನಿಮ್ಮೆಲ್ಲರ ಹಾರೈಕೆ ಇರಲಿ" ಎಂದರು.
"ಈ ಚಿತ್ರದಲ್ಲಿ ನಟಿಸುವಂತೆ ನಿಖಿಲ್ ಅವರು ಹೇಳಿದರು. ನಾನು ಕಥೆ ಕೇಳಿ ಒಪ್ಪಿಕೊಂಡೆ. ಕಥೆ ಚೆನ್ನಾಗಿದೆ" ಎಂದು ನಟ ಕೋಮಲ್ ತಿಳಿಸಿದರು. "ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಕನ್ನಡ ಚಿತ್ರವಿದು. ಚಿತ್ರ ಯಶಸ್ವಿಯಾಗಲಿ" ಎಂದು ಲೈಕಾ ಪ್ರೊಡಕ್ಷನ್ಸ್ ಮುಖ್ಯಸ್ಥರಾದ ಸುಭಾಸ್ಕರನ್ ಅವರು ಹಾರೈಸಿದರು. ಬಳಿಕ ನಾಯಕಿ ಯುಕ್ತಿ ತರೇಜ ಸಹ ನೂತನ ಚಿತ್ರದ ಕುರಿತು ಮಾತನಾಡಿದರು. ಹಲವಾರು ತಂತ್ರಜ್ಞರು ಹಾಗೂ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ಉತ್ತರಕಾಂಡ ಸಿನಿಮಾದ ಕ್ಯಾರೆಕ್ಟರ್ ಟೀಸರ್ ರಿಲೀಸ್; ಗಬ್ರು ಸತ್ಯನಾಗಿ ಮಿಂಚಿದ ಡಾಲಿ