ಆರ್ಆರ್ಆರ್ ಖ್ಯಾತಿಯ ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಇತ್ತೀಚೆಗಷ್ಟೇ ಪೋಷಕರಾಗಿ ಭಡ್ತಿ ಪಡೆದಿದ್ದಾರೆ. ಹಸೆಮಣೆ ಏರಿ 11 ವರ್ಷಗಳ ಬಳಿಕ ಮೊದಲ ಮಗುವಿನ ಪೋಷಕರಾಗಿದ್ದಾರೆ. ಜೂನ್ 20ರಂದು ಉಪಾಸನಾ ಅವರಿಗೆ ಹೆಣ್ಣು ಮಗು ಜನಿಸಿದ್ದು, 'ಕ್ಲೀಂ ಕಾರಾ ಕೊನಿಡೇಲಾ' ಎಂದು ನಾಮಕರಣ ಸಹ ಮಾಡಲಾಗಿದೆ. ಮಗು ಜನಿಸುವ ಮೊದಲೇ ಮೆಗಾ ಪ್ರಿನ್ಸೆಸ್ಗಾಗಿ ಉಡುಗೊರೆಗಳು ಬಂದಿದ್ದವು. ಈಗಲೂ ಮನೆಗೆ ಉಡುಗೊರೆಗಳು ಬರುತ್ತಿವೆ. ಇದೀಗ ಸೂಪರ್ ಸ್ಟಾರ್ಗಳಾದ ಜೂನಿಯರ್ ಎನ್‌ಟಿಆರ್, ಅಲ್ಲು ಅರ್ಜುನ್ ನೀಡಿರುವ ಉಡುಗೊರೆಗಳು ವಿಶೇಷ ಗಮನ ಸೆಳೆದಿವೆ.
ಆರ್ಆರ್ಆರ್ ಸಹನಟ, ರಾಮ್ ಚರಣ್ ಅವರ ಆತ್ಮೀಯ ಸ್ನೇಹಿತ, ಟಾಲಿವುಡ್ ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್ ಅವರು ಕ್ಲೀಂ ಕಾರಾ ಕೊನಿಡೇಲಾ ಅವರಿಗೆ ವಿಶೇಷವಾಗಿ ವಿನ್ಯಾಸಗೊಳಿಸಿರುವ ಚಿನ್ನದ ನಾಣ್ಯಗಳನ್ನು ಕಳುಹಿಸಿದ್ದಾರೆ.
ಇನ್ನು, ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಸಹ ಮಗುವಿಗೆ ಅಮೂಲ್ಯ ಉಡುಗೊರೆ ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಂಗಾರದ ಫಲಕದ ಮೇಲೆ ಕ್ಲೀಂ ಕಾರಾ ಕೊನಿಡೇಲಾ ಹೆಸರು ಸೇರಿದಂತೆ ಜನ್ಮ ವಿವರಗಳನ್ನು ಚಿನ್ನದ ಅಕ್ಷರಗಳಲ್ಲಿ ವಿನ್ಯಾಸಗೊಳಿಸಲಾಗಿದೆ. ಇದನ್ನು ತಿಳಿದ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.
ಮಗು ಜನಿಸುವ ಮುನ್ನವೇ ಮೆಗಾ ಫ್ಯಾಮಿಲಿಗೆ ಉಡುಗೊರೆಗಳ ಮಹಾಪೂರವೇ ಹರಿದು ಬರಲು ಪ್ರಾರಂಭಿಸಿದೆ. ಉಪಾಸನಾ ಅವರು ಮಗುವಿಗೆ ತೊಟ್ಟಿಲು ಉಡುಗೊರೆಯಾಗಿ ಬಂದಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಸಕ್ತಿದಾಯಕ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಹುಟ್ಟಲಿರುವ ಮಗುವಿಗೆ ಪ್ರಜ್ವಲ ಫೌಂಡೇಶನ್ ವಿಶೇಷ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದೆ ಎಂದು ತಿಳಿಸಿದ್ದರು. ತೊಟ್ಟಿಲಿನ ಮಹತ್ವ ಮತ್ತು ಅದನ್ನು ತಯಾರಿಸುವ ರೀತಿಯನ್ನೂ ವಿವರಿಸಿದ್ದರು. ಪ್ರಜ್ವಲ ಫೌಂಡೇಶನ್ ಮಾನವ ಕಳ್ಳಸಾಗಾಣಿಕೆಯಿಂದ ಬದುಕುಳಿದ ಮಹಿಳೆಯರಿಗೆ ಉದ್ಯೋಗ ಮತ್ತು ಆಶ್ರಯ ನೀಡುತ್ತದೆ. ಆ ಪೈಕಿ ಕೆಲವರು ಈ ತೊಟ್ಟಿಲನ್ನು ತಯಾರಿಸಿದ್ದರು.
ಟಾಲಿವುಡ್‌ನ ಯುವ ಸಂಗೀತ ನಿರ್ದೇಶಕ ಕಾಲಭೈರವ ಉಪಾಸನಾ ಮತ್ತು ರಾಮ್ ಚರಣ್ ಅವರ ಮಗುವಿಗೆ ಅದ್ಭುತ ಟ್ಯೂನ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ರಾಮ್ ಚರಣ್ ದಂಪತಿ ಹಂಚಿಕೊಂಡಿದ್ದರು. ಈ ಟ್ಯೂನ್ ಕೇಳಿ ನಮ್ಮ ಮಕ್ಕಳು ಖುಷಿಯಲ್ಲಿ ಮುಳುಗಿದ್ದಾರೆ ಎಂದು ಕಾಲ ಭೈರವ ಅವರಿಗೆ ಕರೆ ಮಾಡಿ ರಾಮ್ ಚರಣ್ ದಂಪತಿ ತಿಳಿಸಿದ್ದರು.
ಜೂನ್ 20 ರಂದು ಮಗು ಜನಿಸಿತು. ಜೂನ್ 30 ರಂದು ನಾಮಕರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮಗುವಿಗೆ ಕ್ಲೀಂ ಕಾರಾ ಕೊನಿಡೇಲಾ ಎಂದು ಹೆಸರಿಡಲಾಗಿದೆ. ಈ ಹೆಸರು ಪ್ರಕೃತಿಯ ರೂಪವನ್ನು ಪ್ರತಿನಿಧಿಸುತ್ತದೆ ಎಂದು ಮೆಗಾಸ್ಟಾರ್ ಚಿರಂಜೀವಿ ಅವರೇ ತಿಳಿಸಿದ್ದಾರೆ. ಲಲಿತಾ ಸಹಸ್ರನಾಮದಿಂದ ಹೆಸರನ್ನು ತೆಗೆದುಕೊಳ್ಳಲಾಗಿದ್ದು, ಆಧ್ಯಾತ್ಮಿಕ ಜಾಗೃತಿಯನ್ನು ತರುವ ಪರಿವರ್ತಕ ಹಾಗೂ ಶುದ್ಧೀಕರಿಸುವ ಶಕ್ತಿಯನ್ನು ಸೂಚಿಸುತ್ತದೆ ಎಂದು ಮೆಗಾ ಕುಟುಂಬ ತಿಳಿಸಿತ್ತು.
ಇದನ್ನೂ ಓದಿ: 93ರ ಅಜ್ಜನೊಂದಿಗೆ ಡ್ಯಾನ್ಸ್ ಮಾಡಿದ ರಣ್ವೀರ್ ಸಿಂಗ್.. ಆನ್ಲೈನ್ಲ್ಲಿ ಜುಮ್ಕಾ ಸಾಂಗ್ ಸದ್ದು