ಸ್ಯಾಂಡಲ್ವುಡ್ ಅಧ್ಯಕ್ಷನಾಗಿ ಸಿನಿಪ್ರಿಯರ ಮನ ಗೆದ್ದಿರುವ ನಟ ಶರಣ್ ಅಭಿನಯದ ಛೂ ಮಂತರ್ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಹಾಸ್ಯನಟನಾಗಿ ಬಳಿಕ ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ಸಕ್ಸಸ್ ಕಂಡ ಶರಣ್ ಅವರು ಚಿತ್ರರಂಗದ ಪೈಸಾ ವಸೂಲ್ ಹೀರೋ ಅನ್ನೋದು ನಿರ್ಮಾಪಕರ ಅಭಿಪ್ರಾಯ. ಅವತಾರ ಪುರುಷ ಬಳಿಕ ಶರಣ್ ಛೂ ಮಂತರ್ ಅನ್ನುತ್ತಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವೇ.
ಛೂ ಮಂತರ್ ಮೋಷನ್ ಪೋಸ್ಟರ್: ಬಹುತೇಕ ಶೂಟಿಂಗ್ ಮುಗಿಸಿರೋ ಛೂ ಮಂತರ್ ಚಿತ್ರದ ಮೋಷನ್ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ತಮ್ಮ ಸಿನಿಮಾ ಬಗ್ಗೆ ಕಲಾವಿದರಾದ ಶರಣ್, ಮೇಘನಾ ಗಾವ್ಕಂರ್, ಅದಿತಿ ಪ್ರಭುದೇವ, ರಜನಿ ಭಾರದ್ವಾಜ್, ನಿರ್ದೇಶಕ ನವನೀತ್ ಸೇರಿದಂತೆ ಚಿತ್ರತಂಡ ಅಭಿಪ್ರಾಯ ಹಂಚಿಕೊಂಡಿದೆ.
- " class="align-text-top noRightClick twitterSection" data="">
ಹಾರರ್ ಚಿತ್ರಗಳ ಅಭಿಮಾನಿ: ಮೊದಲಿಗೆ ಮಾತನಾಡಿದ ನಟ ಶರಣ್, ನಾನು ಚಿಕ್ಕವಯಸ್ಸಿನಿಂದಲೂ ಹಾರರ್ ಚಿತ್ರಗಳ ಅಭಿಮಾನಿ. ಸಾಕಷ್ಟು ಹಾರರ್ ಚಿತ್ರ ನೋಡಿದ್ದೇನೆ. ಈ ಚಿತ್ರದ ಕಥೆಯನ್ನು ನವನೀತ್ ಅದ್ಭುತವಾಗಿ ಮಾಡಿಕೊಂಡಿದ್ದಾರೆ. ಅವರ ಜೊತೆ ಕೆಲಸ ಮಾಡಿರುವುದು ಸಂತೋಷವಾಗಿದೆ. ನನ್ನ ಮಿತ್ರ ತರುಣ್ ಸುಧೀರ್ ಈ ಚಿತ್ರದ ಕಥೆ ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ ಹಾಗೂ ಚಿಕ್ಕಣ್ಣ ಅವರ ಕಾಂಬಿನೇಶನ್ ಎಂದರೆ ಸಹಜವಾಗಿ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇರುತ್ತದೆ. ಈ ಚಿತ್ರದಲ್ಲೂ ನಮ್ಮ ಜೋಡಿ ಮೋಡಿ ಮಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹೀರೋಹಿನ್ಗಳ ಮಾತು: ನಟಿ ಮೇಘನಾ ಗಾಂವ್ಕರ್ ಮಾತನಾಡಿ, ತರುಣ್ ಶಿವಪ್ಪ ನಿರ್ಮಾಣದ ಈ ಹಿಂದಿನ ಚಿತ್ರದಲ್ಲೇ ಅಭಿನಯಿಸಬೇಕಿತ್ತು, ಆದರೆ ಆಗಿರಲಿಲ್ಲ. ಈ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ನನ್ನ ಪಾತ್ರ ಚೆನ್ನಾಗಿದೆ ಎಂದರು. ಬಳಿಕ ಅದಿತಿ ಪ್ರಭುದೇವ ಮಾತನಾಡಿ, ನನಗೂ ಹಾರರ್ ಚಿತ್ರಗಳೆಂದರೆ ಪ್ರಾಣ. ನವನೀತ್ ಅವರ "ಕರ್ವ" ಚಿತ್ರವನ್ನು ಸಾಕಷ್ಟು ಸಲ ನೋಡಿದ್ದೇನೆ. ಶರಣ್ ಸರ್ ಜೊತೆ ನಟಿಸಿರುವ ಸಂತಸವಿದೆ. ಒಳ್ಳೆಯ ಪಾತ್ರ ನೀಡಿರುವ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಧನ್ಯವಾದ ಎಂದರು. ಇನ್ನು ರಜನಿ ಭಾರದ್ವಾಜ್ ಕೂಡ ಚಿತ್ರ ಮತ್ತು ಚಿತ್ರತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಹಿಂದೆ ಕರ್ವ ಸಿನಿಮಾ ಮಾಡಿ ಗಮನ ಸೆಳೆದಿದ್ದ ನಿರ್ದೇಶಕ ನವನೀತ್ ಮಾತನಾಡಿ, ಶರಣ್ ಸರ್ ಜೊತೆ ಕೆಲಸ ಮಾಡಿರುವ ಖುಷಿಯಿದೆ. "ಛೂ ಮಂತರ್" ಎಂದರೆ ಫ್ಯಾನ್ಸಿ ವರ್ಡ್. ಈ ಪದ ತುಂಬಾ ಕಡೆ ಬಳಸುತ್ತಾರೆ. ಚಿತ್ರದಲ್ಲಿ ಮೂರು ಕಥೆಗಳಿರುತ್ತದೆ. ಎಲ್ಲ ಕಥೆಗಳಿಗೂ ಮೂಲ ನಾಯಕ ಆಗಿರುತ್ತಾರೆ. ನನ್ನ ಕಥೆ ಕೇಳಿ ಶರಣ್ ಹಾಗೂ ತರುಣ್ ಸುಧೀರ್ ಇಷ್ಟಪಟ್ಟರು. ಕಂಪ್ಲೀಟ್ ಹಾರರ್ ಸಿನಿಮಾದಲ್ಲಿ ಶರಣ್ ಅವರು ಅಭಿನಯಿಸಿರಲಿಲ್ಲ. ಇದೇ ಮೊದಲು ಎನ್ನಬಹುದು. ನಮ್ಮ ಚಿತ್ರದಲ್ಲಿ ಹಾರಾರ್ ಜೊತೆ ಕಾಮಿಡಿ ಹಾಗೂ ಥ್ರಿಲ್ಲರ್ ಕೂಡ ಇದೆ ಎಂದು ತಮ್ಮ ಚಿತ್ರದ ಬಗ್ಗೆ ವಿವರಣೆ ನೀಡಿದರು.
ಇದನ್ನೂ ಓದಿ: ಪ್ರವಚನ ನಿಲ್ಲಿಸಿದ ಜ್ಞಾನಯೋಗಿ.. ಭಕ್ತರ ಕಣ್ಣೀರಲ್ಲಿ ತೋಯ್ದ ಶ್ರೀಗಳ ನೆನಪು
ನಿರ್ಮಾಪಕ ತರುಣ್ ಶಿವಪ್ಪ ಮಾತನಾಡಿ, ಇದು ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಐದನೇ ಸಿನಿಮಾ. ನಾನು ಹಾಗೂ ಮಾನಸ ತರುಣ್ ಈ ಚಿತ್ರದ ನಿರ್ಮಾಪಕರು. ನಿರ್ದೇಶಕ ನವನೀತ್ ಹಾಗೂ ನಾನು, ಉಪೇಂದ್ರ ಅವರ ಸಿನಿಮಾ ಮಾಡಬೇಕಿತ್ತು. ಕಾರಣಾಂತರಗಳಿಂದ ಆ ಚಿತ್ರ ಸ್ವಲ್ಪ ಮುಂದೆ ಹೋಯಿತು. ಅಷ್ಟರಲ್ಲಿ ನವನೀತ್ ಹಾರರ್ ಜಾನರ್ನ ಈ ಚಿತ್ರದ ಕಥೆ ಸಿದ್ಧ ಮಾಡಿಕೊಂಡಿದ್ದರು. ಶರಣ್ ಹಾಗೂ ತರುಣ್ ಸುಧೀರ್ ಅವರ ಬಳಿ ಕಥೆ ಹೇಳಿದ್ದರು. ಇಬ್ಬರಿಗೂ ಕಥೆ ಹಿಡಿಸಿತು. ಚಿತ್ರ ಆರಂಭವಾಯಿತು ಎಂದರು.
ಬೆಂಗಳೂರು, ಮೈಸೂರು, ಉತ್ತರಕಾಂಡದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಶರಣ್ ಅವರೊಟ್ಟಿಗೆ ಮೂವರು ನಾಯಕಿಯರು ಸೇರಿದಂತೆ ಚಿಕ್ಕಣ್ಣ, ಧರ್ಮ, ಮುಂತಾದವರು ಅಭಿನಯಿಸಿದ್ದಾರೆ. ಅವಿನಾಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಅನೂಪ್ ಅವರ ಛಾಯಾಗ್ರಹಣವಿದೆ. ಶೀಘ್ರದಲ್ಲೇ ಶರಣ್ ಛೂ ಮಂತರ್ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.