ಕಾಟೇರ ನಟ ದರ್ಶನ್ ಅಭಿನಯದ ಸಿನಿಮಾ. ಕಳೆದ ವರಮಹಾಲಕ್ಷ್ಮೀ ಹಬ್ಬದ ದಿನ ಪ್ರಾರಂಭವಾದ ಚಿತ್ರಕ್ಕೆ ಸುಮಾರು 100 ದಿನಗಳ ಚಿತ್ರೀಕರಣ ಮುಗಿಸಿದೆ. ಸದ್ಯ ಮಾತಿನ ಭಾಗದ ಚಿತ್ರೀಕರಣ ಮುಗಿಸಿರೋ ಕಾಟೇರ ಚಿತ್ರತಂಡ ಈ ಸಿನಿಮಾದ ಬಗ್ಗೆ ಕಲೆವೊಂದು ವಿಚಾರಗಳನ್ನ ಹಂಚಿಕೊಂಡಿದೆ. ಇದೇ ವೇಳೆ, ನಟ ದರ್ಶನ್ ಅವರು ತಮ್ಮ ಕಾಲ್ ಶೀಟ್ ಬಗ್ಗೆಯೂ ಮಾತನಾಡಿದ್ದಾರೆ.
ಒಂದು ಸಿನಿಮಾಗೆ 85 ದಿನ ಕಾಲ್ ಶೀಟ್ ಕೊಡುವುದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಹೇಳಿಕೊಂಡಿದ್ದಾರೆ. ಕೆಲ ವರ್ಷಗಳ ಬಳಿಕ ಮಾಧ್ಯಮದ ಮುಂದೆ ಮಾತನಾಡಿದ ದರ್ಶನ್, ಒಂದು ಸಿನಿಮಾ ಕಾಲ್ ಶೀಟ್ ಮತ್ತು ಕಾಟೇರ ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡರು.
'ಆವತ್ತಿನಿಂದ ಇವತ್ತಿನವರೆಗೂ ಒಂದು ನಿಯಮ ಪಾಲಿಸುತ್ತಿದ್ದೇನೆ. ಸಿನಿಮಾಕ್ಕೆ ನನ್ನ ಡೇಟ್ 85 ದಿನ ಅಷ್ಟೇ. ಇವತ್ತು 100ನೇ ದಿನದ ಚಿತ್ರೀಕರಣ ಎಂದು ಚಿತ್ರತಂಡದವರೆಲ್ಲ ಹೇಳಿದ್ದಾರೆ. ಆದರೆ ಇವತ್ತು ನನಗೆ 71ನೇ ದಿನದ ಚಿತ್ರೀಕರಣ. ಇನ್ನು 30 ದಿನ ಅವರು ಬೇರೆ ಕಲಾವಿದರ ಜೊತೆಗೆ ಚಿತ್ರೀಕರಣ ಮಾಡಿದ್ದಾರೆ. ಇನ್ನು, ಮೂರು ದಿನಗಳಿಗೆ ಒಂದೊಂದು ಹಾಡು ಎಂದಿಟ್ಟುಕೊಂಡರೂ, 85 ದಿನಗಳಿಗೆ ಚಿತ್ರದಲ್ಲಿ ನನ್ನ ಕೆಲಸ ಮುಗಿಯುತ್ತದೆ. ಇವತ್ತು ಕ್ಲೈಮ್ಯಾಕ್ಸ್ ಮುಗಿದಿದೆ. ಈಗಾಗಲೇ ಡಬ್ಬಿಂಗ್ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ನಡೆಯುತ್ತಿದೆ. ಮೂರು ಹಾಡುಗಳ ಚಿತ್ರೀಕರಣ ಮುಗಿದರೆ, ಚಿತ್ರ ಸಂಪೂರ್ಣವಾದಂತೆ. ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರುತ್ತೇವೆ' ಅಂತಾ ದರ್ಶನ್ ಹೇಳಿದರು.
ಎಲ್ಲರೂ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಹಿರಿಯರಾದ ಅವಿನಾಶ್, ಕುಮಾರ್ ಗೋವಿಂದ್, ಮಾಲಾಶ್ರೀ, ವಿನೋದ್ ಆಳ್ವ ಅವರೆಲ್ಲ ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಹಿರಿಯರು ಅಷ್ಟು ಹೇಳಿದರೆ, ನಮ್ಮ ಬೆನ್ನು ತಟ್ಟಿದ ಹಾಗೆ. ಎಲ್ಲರೂ ಇದೊಂದು ದೊಡ್ಡ ಪ್ರೊಡಕ್ಷನ್ ಅಂತ ಹೇಳುತ್ತಿದ್ದಾರೆ. ಹೌದು ರಾಕ್‍ಲೈನ್ ಪ್ರೊಡಕ್ಷನ್ಸ್ ಸಂಸ್ಥೆಯ ಚಿತ್ರ ಇದು. ಯಾವುದೇ ನಿರ್ಮಾಣ ಸಂಸ್ಥೆ ಇರಬಹುದು, ನಟರಿರಬಹುದು. ಎಲ್ಲಕ್ಕಿಂತ ದೊಡ್ಡದು ಸಿನಿಮಾ. ಇಡೀ ಸಿನಿಮಾ ಎಲ್ಲರನ್ನೂ ಮುನ್ನಡೆಸುತ್ತದೆ ಅನ್ನೋದು ಚಾಲೆಂಜಿಗ್ ಸ್ಟಾರ್ ಮಾತು.
ಇನ್ನು ಕಾಟೇರ ಸಿನಿಮಾದಲ್ಲಿ ನಟಿಸುತ್ತಿರುವ ಕಲಾವಿದರ ಬಗ್ಗೆ ಮಾತನಾಡಿದ ದರ್ಶನ್, ಇದೇ ಮೊದಲ ಬಾರಿಗೆ ವಿನೋದ್ ಆಳ್ವ ಮತ್ತು ಕುಮಾರ್ ಗೋವಿಂದ್ ಅವರ ಜೊತೆ ಕೆಲಸ ಮಾಡಿದ್ದೇನೆ. ಅವರ ಚಿಕ್ಕ ಚಿತ್ರಕ್ಕೆ ನಾನು ಲೈಟ್‍ಬಾಯ್ ಆಗಿ ಕೆಲಸ ಮಾಡಿದ್ದೆ. ಆಗ ನಾನು ಬಿ ಸಿ ಗೌರಿಶಂಕರ್ ಅವರಿಗೆ ಸಹಾಯಕ ನಿರ್ದೇಶಕನಾಗಿದ್ದೆ. ಅವಿನಾಶ್ ಜೊತೆಗೆ ಹಲವು ಚಿತ್ರಗಳಲ್ಲಿ ನಟಿಸಿದ್ದೇನೆ. ಎಲ್ಲರ ಜೊತೆಗೆ ಕೆಲಸ ಮಾಡಿದ್ದು ಒಂದು ಅದ್ಭುತ ಅನುಭವ ಎಂದರು.
ಜೊತೆಗೆ ತೆಲುಗು ನಟ ಜಗಪತಿ ಬಾಬು ಅವರ ಬಗ್ಗೆ ಒಂದು ವಿಷಯ ಹೇಳಬೇಕು. ಜಗಪತಿ ಬಾಬು ಯಾರ ಜೊತೆಗೂ ಹೆಚ್ಚು ಸೇರುವುದಿಲ್ಲವಂತೆ. ಆದರೆ, ಹೈದರಾಬಾದ್‍ನಲ್ಲಿ ಚಿತ್ರೀಕರಣ ನಡೆಯುವಾಗ ಅವರು ತಮ್ಮ ಮನೆಯಿಂದ ನಮ್ಮೆಲ್ಲರಿಗೂ ಅಡುಗೆ ಮಾಡಿಸಿಕೊಂಡು ಬಂದಿದ್ದರು. ಊಟ ಮಾಡಿ ಕೆಲಸ ಮಾಡುವುದಕ್ಕೆ ಸಾಧ್ಯವಾಗಲಿಲ್ಲ. ಎಲ್ಲಿ ಪ್ರೀತಿ ಇರುತ್ತದೋ, ಎಲ್ಲಿ ನಾವೆಲ್ಲ ಒಂದು ಎಂದು ಕೆಲಸ ಮಾಡುತ್ತೀವೋ, ಆಗ ಚಿತ್ರ ಚೆನ್ನಾಗಿ ಬರುತ್ತದೆ ಅಂತಾರೆ ದರ್ಶನ್.
ಇನ್ನು ಕ್ಯಾರವಾನ್ ಬಿಟ್ಟು ಚೇರ್ ಹಾಕಿಕೊಂಡು ಕುಳಿತಾಗಲೇ ಬಾಂಧವ್ಯ ಬೆಳೆಯೋದು. ಇನ್ನು, ತರುಣ್ ಸುಧೀರ್ ಚಿತ್ರದಲ್ಲಿ ಎಲ್ಲ ಕಲಾವಿದರಿಗೂ ಸ್ಪೇಸ್ ಕೊಟ್ಟಿದ್ದಾರೆ. ಒಬ್ಬ ನಾಯಕ ಎಷ್ಟು ಮಾಡಬೇಕೋ ಅಷ್ಟೇ ಮಾಡಬೇಕು. ಅವಿನಾಶ್ ಅವರ ಸಂಭಾಷಣೆ ನನಗೆ ಹಾಕು, ಇನ್ನೊಬ್ಬರ ಸಂಭಾಷಣೆಯನ್ನೂ ನನಗೆ ಕೊಡು ಎಂದರೆ, ಅವರೇನು ಮಾತನಾಡುತ್ತಾರೆ? ಎಲ್ಲದ್ದಕ್ಕಿಂತ ಸಿನಿಮಾ ದೊಡ್ಡದು. ಅವರೆಲ್ಲರೂ ಜೊತೆಯಾಗಿರೋದಕ್ಕೆ ಕಾಟೇರ ಆಗೋದಕ್ಕೆ ಸಾಧ್ಯ. ಬಾಕಿ ಉಳಿದಿರುವ ಮೂರು ಹಾಡುಗಳ ಚಿತ್ರೀಕರಣ ಮುಗಿಸಿದರೆ ಕಾಟೇರ ಸಿನಿಮಾ ಕುಂಬಳ ಕಾಯಿ ಒಡೆಯಲಾಗುತ್ತೆ. ಅದೆಷ್ಟು ಬೇಗ ಕಾಟೇರ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ ಎಂದು ದರ್ಶನ್ ತಿಳಿಸಿದರು.
ಇದನ್ನೂ ಓದಿ: ಮನಸ್ತಾಪಕ್ಕೆ ಫುಲ್ ಸ್ಟಾಪ್.. 20 ವರ್ಷಗಳ ಬ್ರೇಕ್ ಬಳಿಕ ದರ್ಶನ್ - ಪ್ರೇಮ್ ಕಾಂಬೋದಲ್ಲಿ ಸಿನಿಮಾ