ಮುಲುಗು(ತೆಲಂಗಾಣ) : ನಕ್ಸಲರ ಅಟ್ಟಹಾಸ ಮುಂದುವರೆದಿದೆ. ಮಾಜಿ ಸರ್ಪಂಚ್‌ನನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ನಡೆದಿದೆ. ವೆಂಕಟಾಪುರಂ ಮಂಡಲದ ಕೆ.ರಮೇಶ್ ಮೃತ ದುರ್ದೈವಿಯಾಗಿದ್ದು, ಈತ ಕೊಂಡಾಪುರಂ ನಿವಾಸಿಯಾಗಿದ್ದಾರೆ.
ಮನೆಯಿಂದ ಹೊರಗೆ ಹೋಗಿದ್ದ ಕೆ.ರಮೇಶ್ ವಾಪಸ್ ಆಗಿರಲಿಲ್ಲ. ಬಳಿಕ ನಕ್ಸಲರು ಈತನನ್ನು ಕಿಡ್ನಾಪ್ ಮಾಡಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ತನ್ನ ಪತಿಗೆ ಏನೂ ಮಾಡಬೇಡಿ. ಕೂಡಲೇ ಬಿಡುಗಡೆ ಮಾಡಿ ಎಂದು ಮೃತನ ಪತ್ನಿ ರಜಿತಾ ಎಷ್ಟೇ ಬೇಡಿಕೊಂಡರೂ ಕೆಂಪು ಉಗ್ರರ ಮನಸು ಕರಗಲಿಲ್ಲ ಎಂದು ಹೇಳಲಾಗಿದೆ.
ನಿನ್ನೆ ಅಪಹರಣವಾಗಿದ್ದು, ಇಂದು ಬೆಳಗ್ಗೆ ಛತ್ತೀಸ್‌ಗಢ ಸಮೀಪದ ಕೊತ್ತಪಲ್ಲಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ರಮೇಶ್ ಶವ ಪತ್ತೆಯಾಗಿದೆ. ಘಟನೆ ಕುರಿತು ವೆಂಕಟಾಪುರ ಹಾಗೂ ವಾಜೇಡು ಕಾರ್ಯದರ್ಶಿ ಶಾಂತಾ ಅವರ ಹೆಸರಿನಲ್ಲಿ ಪತ್ರ ನೀಡಲಾಗಿದೆ. ಪೊಲೀಸರಿಗೆ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದ ರಮೇಶ್‌ಗೆ ಸಾರ್ವಜನಿಕ ನ್ಯಾಯಾಲಯದಲ್ಲಿ ಶಿಕ್ಷೆಯಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಪಕ್ಷ ಮತ್ತು ಜನತೆಗೆ ದ್ರೋಹ ಬಗೆದಿದ್ದಕ್ಕೆ ಹತ್ಯೆ ಮಾಡುತ್ತಿದ್ದೇವೆ. ಯಾರೇ ಮಾಹಿತಿದಾರರಾದರೂ ಇದೇ ಗತಿ ಎಂದು ಎಚ್ಚರಿಸಿ ಪತ್ರ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ಪೊಲೀಸರಿಗೆ ಶರಣು ; ದಕ್ಷಿಣ ಭಾರತದಲ್ಲಿ ನಕ್ಸಲ್ ಚಟುವಟಿಕೆ ಅಂತ್ಯ!