ತುಮಕೂರು/ದೇವನಹಳ್ಳಿ: ಸಂಕಷ್ಟ ಕಾಲದಲ್ಲಿ ದೇವೇಗೌಡರನ್ನು ತುಮಕೂರು ಕೈ ಹಿಡಿಯುತ್ತಿತ್ತು. ಹಲವರ ಒತ್ತಡಕ್ಕೆ ಮಣಿದು ಲೋಕಸಭೆ ಚುನಾವಣೆಗೆ ನಿಂತರು. ಆದ್ರೆ ಈ ಜಿಲ್ಲೆಯಲ್ಲಿ ದೇವೇಗೌಡರು ಸೋತಿದ್ದು ಕನಸಿನಲ್ಲೂ ಊಹೆ ಮಾಡಲಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಪಕ್ಷ ಸಂಕಷ್ಟ ಎದುರಿಸುತ್ತಿದೆ:
ತುಮಕೂರಿನಲ್ಲಿ ನಡೆದ ವಿಧಾನಪರಿಷತ್ ಅಭ್ಯರ್ಥಿ ಅನಿಲ್ ಕುಮಾರ್ ಪರ ಪ್ರಚಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಸಂಕಷ್ಟವನ್ನು ಎದುರಿಸುತ್ತಿದೆ. 2018ರ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬರಲಿಲ್ಲ. ತುಮಕೂರು, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ನಮ್ಮ ಹೋರಾಟ ಇದ್ದಿದ್ದು ಕಾಂಗ್ರೆಸ್ ವಿರುದ್ಧ ಎಂದರು.
ಕಾಂಗ್ರೆಸ್ ಮುಖಂಡರು ದೇವೇಗೌಡರ ಬಳಿ ಬಂದು ಮೈತ್ರಿ ಸರ್ಕಾರ ಮಾಡುವ ಪ್ರಸ್ತಾವ ಸಲ್ಲಿಸಿದ್ರು. ದೇವೇಗೌಡರಿಗೆ ಶಕ್ತಿ ತುಂಬಿದವರು ನೀವು. ಕಾಂಗ್ರೆಸ್ ಜೊತೆಗೆ ಹೋಗಬಾರದು ಎಂದು ಜೆಪಿ ಭವನದಲ್ಲಿ ಕಣ್ಣೀರಿಟ್ಟಿದ್ದೆ. ಒಂದು ತಿಂಗಳು ಸಿಎಂ ಮುಳ್ಳಿನ ಕುರ್ಚಿಯ ನೋವು ಅನುಭವಿಸಿದ್ದೇವೆ ಎಂದು ಹೇಳಿದರು.
ತುಮಕೂರಿನ ನೀರಾವರಿ ವಿಚಾರದಲ್ಲೂ ರಾಜಕೀಯ:
28 ಸಾವಿರ ಕೋಟಿ ಹಣ ಹೊಂದಿಸಿದ್ದೆ. ಬಿಜೆಪಿಯವ್ರು ಮಂಡ್ಯದಲ್ಲಿ ಹೇಳ್ತಾರೆ ಜೆಡಿಎಸ್‌ನವರು ಕೃಷಿ, ಸಹಕಾರ ಇಲಾಖೆ ಕೇಳಲಿಲ್ಲ, ಹಣಕಾಸು ಇಲಾಖೆ ಕೇಳಿದ್ರು ಅಂತ. ರೈತರಿಗಾಗಿ ಆರ್ಥಿಕ ಇಲಾಖೆ ಕೇಳಿದೆ. ದುಡ್ಡು ಹೊಡೆಯಲು ಅಲ್ಲ. ರೈತರ ಸಾಲ ಮನ್ನಾ ಮಾಡಿದಾಗ ನನಗೆ ಕಮಿಷನ್ ಬಂತಾ? ಎಂದರು.
ತುಮಕೂರಿನ ನೀರಾವರಿ ವಿಚಾರದಲ್ಲೂ ರಾಜಕೀಯ ಮಾಡಿದ್ರು. ತುಮಕೂರು ಜಿಲ್ಲೆಯ ನೀರಿನ ವಿಚಾರದಲ್ಲಿ ನಮ್ಮ ಕುಟುಂಬ ವಿರೋಧ ಮಾಡಿಲ್ಲ. ದೇವೇಗೌಡರು ಹೋರಾಟ ಮಾಡಿ ಹೇಮಾವತಿ ಕಟ್ಟದಿದ್ದರೆ, ಇವತ್ತು ಏನು ಹೋರಾಟ ಮಾಡುತ್ತಿದ್ದರು. ದೇವೇಗೌಡರ ಸೋಲಿಗೆ ಯಾರು ಕಾರಣ ಅಂತ ನಿಮಗೆ ಗೊತ್ತು. ಎಸ್ಟಿ ಸಮುದಾಯದ ರಿಸರ್ವೇಷನ್ ವಿಚಾರದಲ್ಲಿ ದೇವೇಗೌಡರ ಕೊಡುಗೆ ಇದೆ. ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ ಅವರು ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದರು. ದೇವೇಗೌಡರು ಜ್ವರ ಬಂದ ಸಂದರ್ಭದಲ್ಲೂ ಆ ಅಭ್ಯರ್ಥಿ ಪ್ರಚಾರ ಮಾಡಿದ್ರು. ಅವರಿಗೆ ಮತ ನೀಡಿದ್ರೆ ನನಗೆ ಮತ ನೀಡಿದಂತೆ ಅಂತ ಕೇಳಿಕೊಂಡರು. ಅವರು 1 ಸಾವಿರ ಮತಗಳ ಅಂತರದಿಂದ ಗೆದ್ದರು ಎಂದು ಪರೋಕ್ಷವಾಗಿ ಕೆ.ಎನ್.ರಾಜಣ್ಣ ವಿರುದ್ಧ ಗುಡುಗಿದರು.
ಕಾಂಗ್ರೆಸ್‌ನವರು ಕುತಂತ್ರ ರಾಜಕಾರಣ ಮಾಡಿದ್ದಾರೆ:
ಕಾಂಗ್ರೆಸ್‌ನವರು ಕುತಂತ್ರ ರಾಜಕಾರಣ ಮಾಡಿದ್ದಾರೆ. ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಇಲ್ಲದಿದ್ದರೆ ಲೋಕಸಭೆಯಲ್ಲಿ 5 ಸ್ಥಾನದಲ್ಲಿ ಗೆಲ್ಲುತ್ತಿದ್ದೆವು. ಈ ಪಕ್ಷಕ್ಕೆ ಭವಿಷ್ಯ ಇಲ್ಲ ಅನ್ನೋ ಮಾತು ಸೃಷ್ಟಿಸಿದ್ದಾರೆ. ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ. ಈ ಚುನಾವಣೆ ಜೆಡಿಎಸ್ ಗೆ ಪ್ರಮುಖ ಚುನಾವಣೆ. ರಾಜ್ಯದಲ್ಲಿ 7 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಿದ್ದೇವೆ. ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇನೆ ಎಂದರು.
ಉಪಚುನಾವಣೆ ಹೇಗೆ ನಡೆಯುತ್ತದೆ ಅಂತ ನಿಮಗೆ ಗೊತ್ತು 6 ವಿಧಾನ ಪರಿಷತ್ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುವ ಸಾಧ್ಯತೆಯಿದೆ. ಅಧಿಕಾರ ಹಿಡಿಯಬೇಕೆಂದು ಅಲ್ಲ. ಪಕ್ಷದ ಸಂಘಟನೆ ದೃಷ್ಟಿಯಿಂದ ಪಂಚ ರತ್ನ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ. ರೈತರಿಗೆ ಆರ್ಥಿಕ ಶಕ್ತಿ ತುಂಬುವ ಚಿಂತನೆ ಮಾಡಿದ್ದೇವೆ ಎಂದರು.
ದೇವನಹಳ್ಳಿಯಲ್ಲಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಹೆಚ್‌ಡಿಕೆ:
ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಂ ಎಂದ ಕಾಂಗ್ರೆಸ್ ಮುಖಂಡರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನವರು ನಿಜವಾದ A, B, C Team ಯಾವುದು ಅಂತ ತೋರಿಸಿದ್ದಾರೆಂದು ತಿರುಗೇಟು ನೀಡಿದರು.
ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಹೆಚ್.ಎಂ.ರಮೇಶ್ ಗೌಡ ಪರವಾಗಿ ನಾಮಪತ್ರ ಸಲ್ಲಿಸಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಿದ್ದರು. ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರವಾಸ ಬಂದು ರೈತರು ಕಷ್ಟದಲ್ಲಿರುವ ಸಮಯದಲ್ಲಿ ಬಿಜೆಪಿ ಸರ್ಕಾರ ಜನಸ್ವಾರಾಜ್ ಯಾತ್ರೆಯನ್ನ ನಡೆಸುತ್ತಿದೆ. ಈಗಾಗಲೇ ರೈತರು ಕಂಗಾಲಾಗಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳು ಮುಂದೆ ಹೆಚ್ಚಾಗುವ ಸಾಧ್ಯತೆಯಿದೆ. ಇದಕ್ಕೂ ಮುಂಚೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ವಿಚಾರವಾಗಿ ಮಾತನಾಡಿದ ಅವರು, ಸ್ಥಳೀಯವಾಗಿ 2033 ರ ಚುನಾವಣೆ ಗುರಿಯಾಗಿಸಿಕೊಂಡು ತೀರ್ಮಾನ ಮಾಡಲಾಗಿದೆ. ಜೆಡಿಎಸ್ ಪಕ್ಷ ಹೆಚ್ಚಿನ ಶಾಸಕರನ್ನು ಗೆಲ್ಲುವ ನಿಟ್ಟಿನಲ್ಲಿ ಸ್ಥಳೀಯವಾಗಿ ತೀರ್ಮಾನ ಮಾಡಲಾಗಿದೆ. ಕಾಂಗ್ರೆಸ್ ನವರು ಅಭ್ಯರ್ಥಿ ಆಯ್ಕೆ ಮಾಡಿದ ರೀತಿ ನೋಡಿದರೆ ಗೊತ್ತಾಗುತ್ತದೆ. ಹಾಸನದಲ್ಲಿ ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಮಗನಿಗೆ ಟಿಕೆಟ್ ಕೊಟ್ಟಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಮಂತ್ರಿಗಳ ಪಿಎಯನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಿದ್ದಾರೆ. ಕಾಂಗ್ರೆಸ್ನ ನಿಜವಾದ ಬಣ್ಣ ಇಂದು ಬಯಲಾಗಿದೆ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಬೆಂಗಳೂರು ನಗರ ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ ನಾಮಪತ್ರ ಸಲ್ಲಿಕೆ