ಶಿವಮೊಗ್ಗ: ದೊಡ್ಡಪ್ಪನ ಜೊತೆ ಭದ್ರಾ ಕಾಲುವೆಗೆ ಸ್ನಾನಕ್ಕೆಂದು ತೆರಳಿದ್ದ ಇಬ್ಬರು ಮಕ್ಕಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಭದ್ರಾವತಿ ತಾಲೂಕಿನ ಸಿದ್ದಪುರದ ಬಳಿ ನಡೆದಿದೆ. ನೀರುಪಾಲಾದ ಮಕ್ಕಳನ್ನು ಚಂದನಾ (14) ಹಾಗೂ ಹರ್ಷ (10) ಎಂದು ಗುರುತಿಸಲಾಗಿದೆ.
ಮುದುವಾಲ ಗ್ರಾಮದ ಚಂದನಾ ಹಾಗೂ ಹರ್ಷಾ ಇಬ್ಬರು ತಮ್ಮ ದೊಡ್ಡಮ್ಮನ ಮನೆಯಾದ ಭದ್ರಾವತಿ ತಾಲೂಕಿನ ಆಗರದಹಳ್ಳಿಗೆ ಹೋಗಿದ್ದರು. ಮಂಗಳವಾರ ದೊಡ್ಡಪ್ಪ ತಮ್ಮ ಮಕ್ಕಳೂಂದಿಗೆ ಭದ್ರಾ ಕಾಲುವೆಗೆ ಸ್ನಾನಕ್ಕೆಂದು ತೆರಳಲು ಮುಂದಾಗಿದ್ದರು. ಈ ವೇಳೆ ಚಂದನಾ ಹಾಗೂ ಹರ್ಷ ತಮ್ಮನ್ನು ಸಹ ಕರೆದುಕೊಂಡು ಹೋಗುವಂತೆ ಹಠ ಹಿಡಿದರು. ಅವರ ಹಠಕ್ಕೆ ಸೋತ ದೊಡ್ಡಪ್ಪ ಮಕ್ಕಳೆಲ್ಲರನ್ನೂ ಸ್ನಾನಕ್ಕೆಂದು ಕಾಲುವೆ ಬಳಿ ಕರೆದುಕೊಂಡು ಹೋಗಿದ್ದಾರೆ.
ಓದಿ: ಬಟ್ಟೆ ತೊಳೆಯಲು ಬಂದು ಅತ್ತೆ, ಸೊಸೆ, ಮೊಮ್ಮಕ್ಕಳು ಸೇರಿ ಒಂದೇ ಕುಟುಂಬದ ಐವರು ನೀರುಪಾಲು!
ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕೂಡಲೇ ನೀರಿಗೆ ಹಾರಿದ ದೊಡ್ಡಪ್ಪ ಇಬ್ಬರು ಮಕ್ಕಳನ್ನು ರಕ್ಷಣೆ ಮಾಡಿದ್ರೆ, ಸ್ಥಳೀಯ ಕುರಿಗಾಹಿಯೊಬ್ಬ ಬಾಲಕನೊಬ್ಬನನ್ನು ರಕ್ಷಣೆ ಮಾಡಿದ್ದಾರೆ. ಅಷ್ಟರಲ್ಲಿ ಚಂದನಾ ಹಾಗೂ ಹರ್ಷ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿದರು. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ನಿನ್ನೆಯಿಂದ ಭದ್ರಾವತಿಯ ಅಗ್ನಿ ಶಾಮಕದಳದ ವಸಂತ ಕುಮಾರ್, ಅಶೋಕ್ ಕುಮಾರ್, ಶ್ರೀನಿವಾಸ್, ಕರಿಯಣ್ಣ, ವಿರೇಶ್, ಮಹೇಂದ್ರ ಹಾಗೂ ಹರೀಶ್ ಅವರ ತಂಡ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಈವರೆಗೆ ಮಕ್ಕಳಿಬ್ಬರ ಶವ ಪತ್ತೆಯಾಗಿಲ್ಲ. ಮಳೆಯಿಂದ ಶೋಧ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.