ಮೈಸೂರು: ಮುನಿರತ್ನ ಮತ್ತು ರಮೇಶ್ ಜಾರಕಿಹೊಳಿ ವಿರುದ್ಧ ಇರುವ ಪ್ರಕರಣಗಳು ಕೋರ್ಟ್ನಲ್ಲಿ ಕ್ಲಿಯರ್ ಆಗಲಿದ್ದು ಇಬ್ಬರೂ ಸಚಿವ ಸಂಪುಟ ಸೇರಿ ಮಂತ್ರಿಗಳಾಗಲಿದ್ದಾರೆ ಎಂದು ಸಚಿವ ನಾರಾಯಣ ಗೌಡ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಮಾತನಾಡಿದ ಸಚಿವರು, ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಸಿಎಂ ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ದೆಹಲಿ ಹಾಗೂ ಬಾಂಬೆಗೆ ಅವರ ವೈಯಕ್ತಿಕ ಕೆಲಸಗಳಿಗೆ ಹೋಗಿದ್ದಾರೆ. ರಾಜ್ಯ ಸರ್ಕಾರದಲ್ಲಿ ಯಾವುದೇ ವ್ಯಕ್ತಿಯ ಹಸ್ತಕ್ಷೇಪ ನಡೆಯುತ್ತಿಲ್ಲ. ಮುಖ್ಯಮಂತ್ರಿಗಳು ಆಡಳಿತ ನಡೆಸುತ್ತಿದ್ದು ಅವರ ನೇತೃತ್ವದಲ್ಲೇ ಮುಂಬರುವ ಚುನಾವಣೆ ನಡೆಯಲಿದೆ ಎಂದರು.
ಸಿದ್ದರಾಮಯ್ಯ ಅಧಿವೇಶನ ಕರೆಯಲು ಸರ್ಕಾರಕ್ಕೆ ಹೆದರಿಕೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಕೊರೊನಾ ಮಹಾಮಾರಿ ನಿಲ್ಲದೆ ಅಧಿವೇಶನ ನಡೆಸಲು ಸಾಧ್ಯವೇ ಸಿದ್ದರಾಮಯ್ಯ ಅವರೇ. ಆಹಾರ ಕಿಟ್ ನೀಡಲು 2 ಸಾವಿರ 3 ಸಾವಿರ ಜನರನ್ನು ಸೇರಿಸುತ್ತಿದ್ದಾರೆ ಇದು ಸರಿಯಲ್ಲ. ಚುನಾವಣೆ ಇನ್ನೂ ದೂರವಿದೆ ಈಗ ರಾಜಕಾರಣ ಮಾಡೋಣ ಎಂದು ವ್ಯಂಗ್ಯವಾಡಿದರು.
ಮೈಮುಲ್ ಹಾಲಿಗೆ ನೀರು ಬೆರೆಸಿದ ಪ್ರಕರಣದ ತನಿಖೆಯಾಗುತ್ತಿದ್ದು ಶೀಘ್ರವೇ ವರದಿ ಬರಲಿದೆ ಎಂದ ಸಚಿವರು ಕೆ.ಆರ್.ಎಸ್.ಡ್ಯಾಂ ಬಿರುಕು ಬಿಟ್ಟಿರುವ ವಿಚಾರ ಸತ್ಯಕ್ಕೆ ದೂರವಾದದ್ದು. ಡ್ಯಾಮ್ ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದರು.