ಮೈಸೂರು : 1 ವರ್ಷ 11 ತಿಂಗಳ ಮಗುವೊಂದು ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ನೂರಾರು ವಸ್ತುಗಳನ್ನು ಗುರುತಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ನ ಸಾಧಕರ ಪಟ್ಟಿ ಸೇರಿದೆ. ಮೈಸೂರು ತಾಲೂಕಿನ ಬನ್ನೂರಿನ ಬಿ ಆರ್ ಗಿರೀಶ್ ಮತ್ತು ಗಗನ ದಂಪತಿ ಪುತ್ರ ವೈಭವ್ ಈ ಸಾಧನೆ ಮಾಡಿರುವ ಪುಟಾಣಿ.
ದೇಹದ 20 ಭಾಗಗಳು, 7 ಹಬ್ಬಗಳು, 15 ವಾಹನಗಳು, 35 ಪ್ರಾಣಿಗಳು, 9 ಹಣ್ಣುಗಳು, 19 ತಿಂಡಿಗಳು, 9 ರೀತಿಯ ಉಡುಪುಗಳು, 4 ರಾಷ್ಟ್ರೀಯ ಚಿಹ್ನೆಗಳು, ವರ್ಣ ಮಾಲೆ ಆಧಾರಿತ 72 ವಸ್ತುಗಳನ್ನು ಗುರುತಿಸುವ ಜೊತೆಗೆ ನಾನಾ ರೀತಿಯ ಯೋಗ ಭಂಗಿಗಳನ್ನು ಮಾಡುವ ಕಲೆಯನ್ನು ಮಗು ಕರಗತ ಮಾಡಿಕೊಂಡಿದೆ.
ಮಗುವಿನ ಈ ಎಲ್ಲಾ ವಿಡಿಯೋಗಳನ್ನು ಪೋಷಕರು ಇಂಡಿಯಾ ಬುಕ್ ಆಫ್ ರೆಕಾರ್ಡ್ಗೆ ಕಳುಹಿಸಿದ್ದಾರೆ. ಅದನ್ನು ಪರಿಶೀಲಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ ತಂಡ ತನ್ನ ಅಧಿಕೃತ ವೆಬ್ ಸೈಟ್ನಲ್ಲಿ ಪುಟಾಣಿ ವೈಭವ್ ಹೆಸರನ್ನು ಪ್ರಕಟಿಸಿದೆ. ಪೋಸ್ಟ್ ಮೂಲಕ ಪ್ರಮಾಣ ಪತ್ರವನ್ನು ಪೋಷಕರಿಗೆ ಕಳುಹಿಸಿದ್ದಾರೆ.
2022ರ ಜನವರಿ 12 ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಬಿಡುಗಡೆ ಮಾಡಿದ ಸಾಧಕರ ಪಟ್ಟಿಯಲ್ಲಿ ಪುಟಾಣಿ ವೈಭವ್ ಹೆಸರು ಪ್ರಕಟಗೊಂಡಿದೆ.
ಇದನ್ನೂ ಓದಿ: ಹಿಜಾಬ್ - ಕೇಸರಿ ವಿವಾದ: ಬೆಳಗಾವಿ ಕಾಲೇಜುಗಳ ಮೇಲೆ ಪೊಲೀಸರ ಹದ್ದಿನ ಕಣ್ಣು
ಮಗುವಿನ ತಾಯಿ ಶಿಕ್ಷಕಿಯಾಗಿದ್ದು, ತನ್ನ ಮಗುವಿಗೆ ಆಟಿಕೆಗಳಿಗಿಂತ ಹೆಚ್ಚಾಗಿ ಪುಸ್ತಕಗಳನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಮಗುವಿಗೆ ಪುಸ್ತಕದ ಮೇಲೆ ಹೆಚ್ಚಿನ ಒಲವಿದೆ. ಪುಸ್ತಕದ ಜೊತೆಗೆ ಹೆಚ್ಚಿನ ಕಾಲ ಕಳೆಯುವ ತಮ್ಮ ಮಹುವಿನ ಬಗ್ಗೆ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.