ಮೈಸೂರು: ಮೇಕೆದಾಟು ಹೋರಾಟಕ್ಕೆ ಪ್ರತಿರೋಧ ಕೇಳಿಬರುತ್ತಿವೆ. ಎಲ್ಲ ರೀತಿಯ ಟೀಕೆಗಳನ್ನೂ ನಾವು ಜೀರ್ಣಿಸಿಕೊಳ್ಳುತ್ತಿದ್ದು, ಎಲ್ಲರಿಗೂ ಸ್ವಾಗತ ಕೋರಿದ್ದೇನೆ. ಯಾವುದೇ ಪಕ್ಷದವರೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು. ರಾಜ್ಯದ ನೆಲ, ಜಲದ ವಿಚಾರವಾಗಿ ನಾವು ಹೋರಾಟ ಕೈಗೊಂಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ನಿಂದ ಕೈಗೊಳ್ಳಲಾಗುತ್ತಿರುವ ಪಾದಯಾತ್ರೆ ಕುರಿತಂತೆ ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜಂಟಿ ಮಾಧ್ಯಮಗೋಷ್ಠಿ ನಡೆಸಿದರು. ಪಾದಯಾತ್ರೆಗೆ ಸ್ವಾಮೀಜಿಗಳು, ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಎಲ್ಲರನ್ನೂ ಆಹ್ವಾನಿಸಿದ್ದೇನೆ. 25 ಸಂಸದರನ್ನೂ ಕರೆದುಕೊಂಡು ಹೋಗಿ ಅರಣ್ಯ ಇಲಾಖೆಯ ಎನ್‌ಒಸಿ ಕೇಳಿದರೆ 5 ನಿಮಿಷದಲ್ಲಿ ಸಿಗುತ್ತದೆ. 15 ದಿನಗಳಲ್ಲಿ ಕೆಲಸ ಶುರು ಮಾಡಬಹುದು, ಯಾವುದೇ ಹಳ್ಳಿ ಮುಳುಗಡೆ ಆಗುವುದಿಲ್ಲ ಎಂದು ಹೇಳಿದರು.
ಓದಿ: ರಾಜ್ಯದಲ್ಲಿ ಕಠಿಣ ಕ್ರಮ ಕುರಿತು ನಾಳೆ ತಜ್ಞರ ಜೊತೆ ಸಭೆ, ಗುರುವಾರ ಸಂಪುಟ ಸಭೆಯಲ್ಲಿ ಚರ್ಚೆ: ಸಿಎಂ
ರಾಜಕಾರಣ ಎಂದು ಬಿಂಬಿಸಲಾಗುತ್ತಿದೆ: ನಮ್ಮ ಪಾದಯಾತ್ರೆಯನ್ನು ರಾಜಕಾರಣಕ್ಕಾಗಿ ನಡೆಸಲಾತ್ತಿದೆ ಎಂದು ಬಿಂಬಿಸುತ್ತಿದ್ದಾರೆ. ಆದರೆ, ನಮಗೆ ಸಾಮಾಜಿಕ ಕಳಕಳಿಯಿದೆ, ಅಧಿಕಾರ ಒಂದೇ ಮುಖ್ಯವಲ್ಲ.
ಬಹುತೇಕ ವಿಷಯಗಳಲ್ಲಿ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲೂ ನಾವು ಹೋರಾಟ ಮಾಡಿದ್ದೇವೆ. ಕುಡಿಯುವ ನೀರು ಯೋಜನೆಗೆ ಎನ್‌ಒಸಿ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಕೇವಲ ಪರಿಸರ ಇಲಾಖೆ ಅನುಮತಿ ಅಗತ್ಯವಿದೆ ಎಂದು ತಿಳಿಸಿದರು.
ಈ ಹೋರಾಟದಲ್ಲಿ ಭಾಗಿಯಾಗುವಂತೆ ಸಮಾಜದ ಎಲ್ಲಾ ಸ್ಥಳದ ಮುಖಂಡರು, ನಾಯಕರು, ಮಠಾಧಿತಿಗಳು, ಹಾಲಿ ಮಾಜಿ ಶಾಸಕರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದೇವೆ. ಹೋರಾಟದ ನೇತೃತ್ವವನ್ನು ಕಾಂಗ್ರೆಸ್ ವಹಿಸಿಕೊಂಡಿದೆ.
ಈಗಿನ ಪಾದಯಾತ್ರೆಯನ್ನು ಟೀಕಿಸುತ್ತಿರುವ ಪಕ್ಷ ಹಾಗೂ ನಾಯಕರು ಕೂಡ ಈ ಮೊದಲು ಸಾಕಷ್ಟು ಪಾದಯಾತ್ರೆ ಹೋರಾಟಗಳನ್ನು ಮಾಡಿದ್ದಾರೆ. ಮೇಕೆದಾಟು ಯೋಜನೆಯು ಒಂದು ಬೆಂಗಳೂರು, ಮತ್ತೊಂದು ಮೈಸೂರು ಜಿಲ್ಲೆಯನ್ನು ಒಳಗೊಂಡಿತ್ತು. ಆದರೆ, ರಾಮನಗರ ಜಿಲ್ಲೆಯ ಕನಕಪುರ ಹಾಗೂ ಚಾಮರಾಜನಗರ ಜಿಲ್ಲೆ ಹನೂರಿನ ನಡುವೆ ಈ ಯೋಜನೆ ಬರಲಿದೆ ಎಂದು ಮಾಹಿತಿ ನೀಡಿದರು.
ಓದಿ: ಕರ್ನಾಟಕ, ಉತ್ತರ ಪ್ರದೇಶ ಸೇರಿದಂತೆ ಮಕ್ಕಳಿಗೆ ಮೊದಲ ಹಂತದ ಲಸಿಕಾ ಅಭಿಯಾನ ಪ್ರಾರಂಭ
ರಾಜ್ಯದಲ್ಲಿ ಅಧಿಕಾರದಲ್ಲಿರುವುದು ದಪ್ಪ ಚರ್ಮದ ಸರ್ಕಾರವಾಗಿದ್ದು, ಹಾಗಾಗಿ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತಿದ್ದೇವೆ. ನಾವು ಸರ್ಕಾರವನ್ನು ಎಚ್ಚರಿಸುವಂತಹ ಕೆಲಸ ಮಾಡುತ್ತಾ ಬಂದಿದ್ದು, ಎಲ್ಲ ಹೋರಾಟಗಳು ಫಲಪ್ರದವಾಗುತ್ತಿವೆ.
ಹೋರಾಟಗಳ ಪರಿಣಾಮವಾಗಿಯೇ ಇತ್ತೀಚೆಗೆ ನಡೆದ ಬಹುತೇಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ. ಆಡಳಿತ ಪಕ್ಷ ಬಿಜೆಪಿ ಹಿಂದಿಕ್ಕಿ ಕಾಂಗ್ರೆಸ್ ಮುನ್ನೆಲೆಗೆ ಬಂದಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದರು.
ಲಾಕ್ಡೌನ್ ಜಾರಿಗೂ ನಾವು ಹೆದರುವುದಿಲ್ಲ. ಕೊರೊನಾ ಪ್ರಕಣಗಳನ್ನು ಹೆಚ್ಚಾಗಿ ಸೃಷ್ಟಿಸಿ ಪಾದಯಾತ್ರೆ ತಡೆಯಲು ಯತ್ನಿಸುತ್ತಿದ್ದಾರೆ. ಲಾಕ್ಡೌನ್ ಜಾರಿಯಾದರೂ ನಾವು ಪಾದಯಾತ್ರೆ ನಡೆಸುತ್ತೇವೆ. ಮೇಕೆದಾಟು ಪಾದಯಾತ್ರೆ ತಡೆಯಲು ಸಾಧ್ಯವಿಲ್ಲ.
ನನ್ನ ಮೇಲೆ, ಸಿದ್ದರಾಮಯ್ಯ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಕೇಸ್ ಹಾಕಿದ್ದಾರೆ. ಈಗಲೂ ಅಂತ ಆಲೋಚನೆ ಅವರಿಗೆ ಇದ್ದರೆ ನಾವು ಹೆದರುವುದಿಲ್ಲ. ಬೇಕಿದ್ದರೆ ನಮ್ಮನ್ನು ಜೈಲಿಗೆ ಹಾಕಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮೈಸೂರಿನಲ್ಲಿ ಹೇಳಿದರು.