ಚಾಮರಾಜನಗರ/ಮೈಸೂರು : ಚಾಮರಾಜನಗರದಲ್ಲಿ ವಾಹನ ಡಿಕ್ಕಿಯಾಗಿ ಜಿಂಕೆಯೊಂದು ಸಾವಿಗೀಡಾದರೆ, ಆಹಾರ-ನೀರಿಲ್ಲದೇ ಕಾಡಾನೆಯೊಂದು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.
ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಜಿಂಕೆಗೆ ಗುಂಡ್ಲುಪೇಟೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಮುಂಭಾಗ ವಾಹನವೊಂದು ಡಿಕ್ಕಿಯಾಗಿದೆ. ಪರಿಣಾಮ ಜಿಂಕೆ ರಸ್ತೆಯಲ್ಲೇ ಸಾವನ್ನಪ್ಪಿದೆ. ಈ ಭಾಗದಲ್ಲಿ ಕಾಡು ಪ್ರಾಣಿಗಳು ಸಂಚರಿಸುವ ಕಾರಣ ವಾಹನಗಳ ವೇಗಕ್ಕೆ ಕಡಿವಾಣ ಹಾಕಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಗುಂಡ್ಲುಪೇಟೆ ವಲಯ ಅರಣ್ಯಾಧಿಕಾರಿ ಲೋಕೇಶ್ ಸ್ಥಳಕ್ಕೆ ಭೇಟಿ ನೀಡಿದ್ದು, ಸಿಸಿಟಿವಿಗಳ ದೃಶ್ಯ ಪರಿಶೀಲಿಸಿದ್ದಾರೆ. ಡಿಕ್ಕಿ ಹೊಡೆದು ಪರಾರಿಯಾದ ವಾಹನ ಪತ್ತೆಗೆ ಮುಂದಾಗಿದ್ದಾರೆ.
ನಂಜನಗೂಡಿನಲ್ಲಿ ಕಾಡಾನೆ ಸಾವು
ನಂಜನಗೂಡಿನ ಹೆಡಿಯಾಲ ಗ್ರಾಮದ ಬಳಿ ಕಾಡಾನೆಯೊಂದು ಆಹಾರ, ನೀರಿಲ್ಲದೇ ಅಸ್ವಸ್ಥಗೊಂಡು ಮೃತಪಟ್ಟಿದೆ. ಆಹಾರ ಅರಸಿ ನಾಡಿಗೆ ಬಂದಿದ್ದ ಕಾಡಾನೆ ಮರಳಿ ಕಾಡಿನೊಳಗೆ ಹೋಗಲು ಶಕ್ತಿ ಇಲ್ಲದೆ ಅಸ್ವಸ್ಥಗೊಂಡು ನಂಜನಗೂಡಿನ ಹೆಡಿಯಾಲ ಗ್ರಾಮದ ಕುದುರೆಗುಂಡಿ ಹಳ್ಳದ ಕೆರೆ ನಾಲೆಯ ಸಮೀಪದ ಲಿಂಗರಾಜು ಎಂಬುವರ ಜಮೀನಿನಲ್ಲಿ ಅಸ್ವಸ್ಥವಾಗಿ ಬಿದ್ದಿತ್ತು. ಮೇಲೇಳಲಾಗದೇ ಕಳೆದ 4 ದಿನದಿಂದ ಅಲ್ಲೇ ನರಾಳಾಡುತ್ತಿತ್ತು.
ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಬಂದು ಆನೆಗೆ ಚಿಕಿತ್ಸೆ ನೀಡಿದ್ದಾರೆ. ಆನೆಯು ಆಹಾರವಿಲ್ಲದೆ, ಅನಾರೋಗ್ಯ ಅಥವಾ ವೃದ್ಧಾಪ್ಯದಿಂದಾಗಿ ಅಸ್ವಸ್ಥಗೊಂಡು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅಮೆರಿಕಗೆ ವಿಮಾನಯಾನ ಸೇವೆ ರದ್ದುಗೊಳಿಸಿದ ಏರ್ಇಂಡಿಯಾ: ಇಲ್ಲಿದೆ ಕಾರಣ