ಮಂಗಳೂರು: ರಾಮನಗರಕ್ಕೆ ಪಾದರಾಯನಪುರ ಆರೋಪಿಗಳ ಸ್ಥಳಾಂತರ ಪ್ರಕರಣ ಸರ್ಕಾರ ಸೃಷ್ಟಿಸಿದ ಸಮಸ್ಯೆ. ಏಕಾಏಕಿ ಕ್ವಾರಂಟೈನ್ನಲ್ಲಿ ಇದ್ದವರನ್ನು ಸ್ಥಳಾಂತರ ಮಾಡಿರೋದು ಸರಿಯಲ್ಲ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದ್ದಾರೆ.
ಸರ್ಕಾರದ ಏಕಾಏಕಿ ನಿರ್ಧಾರದಿಂದ ರಾಮನಗರದ ಜೈಲಿನಲ್ಲಿದ್ದವರಿಗೂ, ಜೈಲು ಅಧಿಕಾರಿಗಳಿಗೂ ಸೋಂಕು ಹರಡುವ ಸನ್ನಿವೇಶ ಸೃಷ್ಟಿಯಾಗಿದೆ. ಸರ್ಕಾರ ಯಾವುದೇ ಯೋಜನೆ ಹಾಕದೆ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಹೇಳಿದರು. ಇಂತಹ ನಿರ್ಧಾರಗಳಿಂದ ಸರ್ಕಾರಕ್ಕೆ ಕೊರೊನಾ ಸೋಂಕನ್ನು ಎದುರಿಸಲು ಸರಿಯಾದ ದಿಕ್ಸೂಚಿ ಇಲ್ಲ ಎಂದು ತಿಳಿಯುತ್ತದೆ. ಈ ಸಂಬಂಧಪಟ್ಟಂತೆ ಸಮಸ್ಯೆ ಬಗೆಹರಿಸಲು ಸಿದ್ಧತೆ ನಡೆಸಬೇಕಾಗಿದೆ ಎಂದು ಹೇಳಿದರು.
ಕ್ವಾರಂಟೈನ್ನಲ್ಲಿ ಇದ್ದವರನ್ನು ಕಳಿಸುವಾಗ ಪೊಲೀಸರಿಗೆ, ಆರೋಗ್ಯ ಅಧಿಕಾರಿಗಳಿಗೆ ಪಿಪಿಇ ಕಿಟ್ ವ್ಯವಸ್ಥೆಯನ್ನೂ ಮಾಡಿಲ್ಲ. ಯಾವುದೇ ಮುಂಜಾಗ್ರತಾ ವ್ಯವಸ್ಥೆ ಇಲ್ಲದೆ ಅವರನ್ನು ಕಳಿಸುವ ವ್ಯವಸ್ಥೆ ಆಗಿದೆ. ಜನರು ಒಂದೂವರೆ ತಿಂಗಳಿನಿಂದ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಿದ್ದರೂ ಸರ್ಕಾರದಲ್ಲಿ ಮಾತ್ರ ಇನ್ನೂ ಕೂಡಾ ಸ್ಪಷ್ಟವಾದ ಆಕ್ಷನ್ ಪ್ಲ್ಯಾನ್ ಇಲ್ಲ.
ಇನ್ನಾದರೂ ಸರ್ಕಾರ ಎಚ್ಚೆತ್ತು, ಸಮಸ್ಯೆ ಬರೋದಕ್ಕಿಂತ ಮುಂಚೆ ಕಾರ್ಯಯೋಜನೆ ಹಾಕಿಕೊಂಡು ಸಮಸ್ಯೆ ನಿವಾರಣೆ ಮಾಡಿಕೊಳ್ಳಲಿ ಎಂದು ಯು.ಟಿ.ಖಾದರ್ ಹೇಳಿದರು.