ಮಂಗಳೂರು: ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತಗಳನ್ನು ಪಡೆಯಲು ಆರ್‌ಎಸ್‌ಎಸ್ ದೂಷಿಸಿ ಚಿಲ್ಲರೆ ರಾಜಕಾರಣ ಮಾಡಿ, ನಿಮ್ಮ ವ್ಯಕ್ತಿತ್ವವನ್ನು ಚಿಲ್ಲರೆ ಮಾಡಿಕೊಳ್ಳಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಜಿ ಸಿಎಂ ಕುಮಾರಸ್ವಾಮಿಗೆ ಸಲಹೆ ನೀಡಿದ್ದಾರೆ.
ಕುಮಾರಸ್ವಾಮಿ ಅವರು ಮುಂದಿನ ಚುನಾವಣೆ ದೃಷ್ಟಿಯಿಂದ ಅಲ್ಪಸಂಖ್ಯಾತ ಮತದ ಆಸೆಯಿಂದ ಆರ್‌ಎಸ್‌ಎಸ್ ವಿರುದ್ಧ ಹೇಳಿಕೆ ನೀಡಿದ್ದಾರೆ. ಆರ್‌ಎಸ್‌ಎಸ್ ಒಳಗೆ ಅನೇಕ ಮುಸ್ಲಿಂ, ಕ್ರೈಸ್ತರು ಇದ್ದಾರೆ. ಕುಮಾರಸ್ವಾಮಿ ಅವರು ಯಾರನ್ನೊ ಓಲೈಕೆ ಮಾಡಲು, ವೋಟಿಗಾಗಿ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ.
ಮಾಜಿ ಸಿಎಂ ಆಗಿ ಶ್ರೇಷ್ಠ ಗೌರವ ಪಡೆಯಬೇಕಾದವರು ಇಂತಹ ಚಿಲ್ಲರೆ ರಾಜಕಾರಣ ಮಾಡಿ ನಿಮ್ಮ ವ್ಯಕ್ತಿತ್ವ ಚಿಲ್ಲರೆ ಮಾಡಬೇಡಿ ಎಂದು ಹೇಳಿದ್ದಾರೆ. ಸಂಘದ ಬಗ್ಗೆ ಹೊರಗಿನಿಂದ ನೋಡಿ ಅಳತೆ ಮಾಡಲು ಆಗುವುದಿಲ್ಲ. ಆ ರೀತಿ ಅಳತೆ ಮಾಡಿದವರು ಮೂರ್ಖರಾಗುತ್ತಾರೆ. ಕುಮಾರಸ್ವಾಮಿ ಅವರು ಕುರುಡು ಕಣ್ಣಿನಿಂದ ಸಂಘವನ್ನು ನೋಡಿದ್ದಾರೆ. ಹೆಚ್‌ಡಿಕೆ, ಸಿದ್ದರಾಮಯ್ಯ ಅವರು ಸಂಘಕ್ಕೆ ಬಯ್ಯುವುದಿದ್ದರೆ ಸಂಘದ ಒಳಗೆ ಬಂದು ನೋಡಿ ಮಾತಾಡಿ ಎಂದಿದ್ದಾರೆ.
ಆರ್‌ಎಸ್‌ಎಸ್ ಶಿಬಿರಕ್ಕೆ ಬಂದು ಮಹಾತ್ಮ ಗಾಂಧಿ ಹೊಗಳಿದ್ದಾರೆ:
ಕಾಂಗ್ರೆಸ್ ಮತ್ತು ಜೆಡಿಎಸ್ ನವರಿಗೆ ಅಧಿಕಾರ ಇಲ್ಲದೆ ಹುಚ್ಚು ಹಿಡಿದಿದೆ. ಅಧಿಕಾರ ಇಲ್ಲದಿದ್ದಾಗ ಇವರು ಸ್ಥಿಮಿತ ಕಳೆದುಕೊಳ್ಳುತ್ತಾರೆ. ಬಹಳಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದ್ದು, ಅದನ್ನು ಕಳೆದುಕೊಂಡಾಗ ಈ ರೀತಿ ಆಗುತ್ತದೆ. ಆರ್‌ಎಸ್‌ಎಸ್ ಶಿಬಿರಕ್ಕೆ ಮಹಾತ್ಮ ಗಾಂಧೀಜಿ ಬಂದು ಹೊಗಳಿದ್ದಾರೆ. ಅಂಬೇಡ್ಕರ್, ಪ್ರಣಬ್ ಮುಖರ್ಜಿ ಶಿಬಿರಕ್ಕೆ ಬಂದಿದ್ದಾರೆ. ಸಂಘ ವ್ಯಕ್ತಿತ್ವ ನಿರ್ಮಾಣ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಕಟೀಲ್ ಹೇಳಿದರು.
ಉಗ್ರಪ್ಪ, ಸಿಂಧಿಯಾ ಅವರು ಆರ್‌ಎಸ್‌ಎಸ್ ಶಿಕ್ಷಣ ಪಡೆದವರು. ಆರ್‌ಎಸ್‌ಎಸ್ ಶಿಕ್ಷಣ ಪಡೆದವರು ಬಿಜೆಪಿಯಲ್ಲೇ ಇರಬೇಕೆಂದೇನಿಲ್ಲ. ಎಲ್ಲ ಕಡೆ ಇರಬೇಕು ಎಂದರು.