ಮಂಗಳೂರು: ಮುಂಗಾರು ಮಳೆ ಆರಂಭದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಸಂಚಾರಕ್ಕೆ ಅನಾನುಕೂಲವಾಗುವ ಕಡೆಗಳಲ್ಲಿ ಶಾಲೆಗಳಿಗೆ ಮತ್ತು ಎಲ್ಲ ಪಿಯುಸಿ, ಡಿಗ್ರಿ ಕಾಲೇಜುಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ರಜೆ ಘೋಷಿಸಿದೆ. ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಬುಧವಾರ ರಾತ್ರಿಯಿಂದ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಬಿರುಸಿನ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಭಾರಿ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ತಗ್ಗು ಪ್ರದೇಶಗಳು ತುಂಬುತ್ತಿದ್ದು, ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ನಗರದ ಗುಜ್ಜರಕೆರೆ ಬಳಿಯ ಅರೆಕೆರೆ ಬೈಲ್ನಲ್ಲಿ ಚರಂಡಿ ನೀರು ರಸ್ತೆಗೆ ಬಂದು ಜನರು ಪರದಾಡುತ್ತಿದ್ದಾರೆ. ಹಲವೆಡೆ ಬಯಲು ಪ್ರದೇಶಗಳಿಗೆ ನೀರು ನುಗ್ಗಿದೆ.
ಪಿಯು - ಡಿಗ್ರಿ ಕಾಲೇಜುಗಳಿಗೆ ರಜೆ: ಬೆಳಗ್ಗೆ ಮಳೆಯ ಅಬ್ಬರ ಹೆಚ್ಚಾಗಿದೆ. ಇನ್ನು ಈಗಾಗಲೇ ಮಕ್ಕಳು ಶಾಲೆಗೆ ತೆರಳಿರುವುದರಿಂದ ಶಾಲೆಗೆ ತೆರಳಲು ಅನಾನುಕೂಲವಾಗುವ ಶಾಲೆಗಳಿಗೆ ರಜೆ ನೀಡಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಹಾಗೆಯೇ ಪಿಯುಸಿ ಮತ್ತು ಪದವಿ ತರಗತಿಗಳಿಗೆ ರಜೆ ಘೋಷಣೆ ಮಾಡಲಾಗಿದೆ
(ಇದನ್ನೂ ಓದಿ: ಇಲ್ಲಿ ಭಾರಿ ಮಳೆ.. 8 ಲಕ್ಷ ಜನರಿಗೆ ಸಂಕಷ್ಟ.. ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ)