ಮಂಗಳೂರು: ಮಹಾಮಾರಿ ಕೊರೊನಾ ವೈರಸ್ ಕೇವಲ ಸೋಂಕಿತರನ್ನಷ್ಟೇ ಬಲಿ ಪಡೆದಿಲ್ಲ. ನೂರಾರು ಮಂದಿ ಕಾರ್ಮಿಕರು ಬೀದಿಪಾಲಾಗುವಂತೆ ಮಾಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬರೋಬ್ಬರಿ 4 ಲಕ್ಷ ಬೀಡಿ ಕಾರ್ಮಿಕರ ಬದುಕು ದುಸ್ತರವಾಗಿದೆ. ಮಾತ್ರವಲ್ಲದೇ ಇವರನ್ನು ಅವಲಂಬಿಸಿರುವ ಕುಟುಂಬಗಳು ಜೀವನ ಸಾಗಿಸುವುದು ಕಷ್ಟಕರವಾಗಿದೆ.
ಬೀಡಿ ಕಾರ್ಮಿಕರೊಬ್ಬರು ದಿನಕ್ಕೆ ಸರಾಸರಿ 500 ಬೀಡಿ ಕಟ್ಟಲು ಸಾಧ್ಯವಾಗುತ್ತದೆ. ಒಂದು ಸಾವಿರ ಬೀಡಿ ಕಟ್ಟಿದರೆ 187 ರೂಪಾಯಿ ಸಿಗುತ್ತದೆ. ಅದರಂತೆ ಇವರ ದಿನದ ಆದಾಯ 90 ರೂಪಾಯಿ ಆಗುತ್ತದೆ. ನಿತ್ಯ ದುಡಿದು ಜೀವನ ಸಾಗಿಸುವ ಈ ಕಾರ್ಮಿಕರಿಗೆ ಲಾಕ್ ಡೌನ್ ಬಳಿಕ ಉದ್ಯೋಗ ಇಲ್ಲದಂತಾಗಿದೆ. 58 ವರ್ಷ ಮೀರಿದ ಕಾರ್ಮಿಕರಿಗೆ ಕೇವಲ 1 ಸಾವಿರ ರೂಪಾಯಿ ಪಿಂಚಣಿ ಸಿಗುತ್ತದೆ. ಇದು ಕೂಡ ಯಾವುದಕ್ಕೂ ಸಾಲುತ್ತಿಲ್ಲ. ಬೀಡಿ ಕೈಗಾರಿಕೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಲ್ಲಿ ಹೆಚ್ಚಿನವರು ಮಹಿಳೆಯರಿದ್ದು, ಶೇಕಡಾ 75 ರಷ್ಟು ಇವರದ್ದೇ ಪಾಲು ಇದೆ.
ಮನೆಯಲ್ಲಿ ಪುರುಷರು ಇತರೆ ಕೆಲಸಕ್ಕೆ ಹೋದರೆ ಮಹಿಳೆಯರು ಮನೆಯಲ್ಲಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದರು. ಇದೀಗ ಲಾಕ್ ಡೌನ್ ನಿಂದ ಪುರುಷರಿಗೆ ಉದ್ಯೋಗ ಇಲ್ಲ. ಮನೆಯಲ್ಲಿ ಬೀಡಿ ಕಟ್ಟುತ್ತಿದ್ದ ಮಹಿಳೆಯರಿಗೂ ಉದ್ಯೋಗವಿಲ್ಲದಂತಾದ ಪರಿಣಾಮ ಒಪ್ಪೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಬೀಡಿ ಕಾರ್ಮಿಕರ ಉದ್ಯೋಗದಿಂದ ಸಾಮಾಜಿಕ ಅಂತರದ ಸಮಸ್ಯೆ ಉಂಟಾಗುವುದಿಲ್ಲ. ಬೀಡಿ ಕಾರ್ಮಿಕರು ತಮ್ಮ ಮನೆಯಲ್ಲಿ ಬೀಡಿ ಕಟ್ಟಿ ಒಮ್ಮೆ ತಮ್ಮ ಮನೆಯ ಸಮೀಪದ ಬೀಡಿ ಗುತ್ತಿಗೆದಾರರಿಗೆ ಅದನ್ನು ತಲುಪಿಸುತ್ತಾರೆ. ಬೀಡಿ ಉದ್ದಿಮೆಯಿಂದ ಯಾವುದೇ ಸಾಮಾಜಿಕ ಅಂತರದ ತೊಂದರೆಯೂ ಆಗುವುದಿಲ್ಲ. ಕೇರಳ ಸರ್ಕಾರ ಬೀಡಿ ಕಾರ್ಮಿಕರ ಸಂಕಷ್ಟ ಅರಿತು ಎರಡು ದಿನ ಬೀಡಿ ಕಾರ್ಮಿಕರಿಗೆ ಕೆಲಸ ನೀಡುವ ನಿರ್ಧಾರಕ್ಕೆ ಬಂದಿದೆ. ಇಂತದ್ದೇ ನಿರ್ಧಾರವನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೀಡಿ ಕಾರ್ಮಿಕರು ನಿರೀಕ್ಷಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಬೀಡಿ ಕಂಪನಿಗಳಿವೆ. ಇಲ್ಲಿ ದುಡಿಯುತ್ತಿರುವ ಕಾರ್ಮಿಕರ ನೆರವಿಗೆ ಸರ್ಕಾರವೂ ಬರಬೇಕು ಎನ್ನುವುದು ಇವರ ಬೇಡಿಕೆಯಾಗಿದೆ.