ಹುಬ್ಬಳ್ಳಿ: ಸವದತ್ತಿ ತಾಲೂಕಿನ ಶ್ರೀ ಕ್ಷೇತ್ರ ಶಿರಸಂಗಿ ಕಾಳಿಕಾ ದೇವಸ್ಥಾನ ಟ್ರಸ್ಟಿಗೆ ದೇಣಿಗೆ ನೀಡಬೇಡಿ, ದವಸ ಧಾನ್ಯ ಕೊಡಬೇಡಿ ಎಂದು ಧಾರವಾಡ ವಿಶ್ವಕರ್ಮ ಸಮಾಜದ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಹು-ಧಾ ಮಹಾನಗರ ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ್ ಇವರು ಕಳಿಸಿರುವ ಸಂದೇಶ ದೇವಸ್ಥಾನಕ್ಕೆ ಅವಮಾನ ಮಾಡಿದಂತಾಗಿದೆ ಎಂದು ದೇವಸ್ಥಾನದ ಅರ್ಚಕ ನಾಗೇಂದ್ರಾಚಾರ್ಯ ಆರೋಪಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯನ್ನು ಟ್ರಸ್ಟ್ ಬಲವಾಗಿ ಖಂಡಿಸುತ್ತದೆ. ಶಿರಸಂಗಿಯ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಎನ್.ಜಿ.ಓ ಸಂಸ್ಥೆಯಾಗಿದ್ದು, ಈ ಸಂಸ್ಥೆಗೆ ದೇಣಿಗೆ ದವಸ ಧಾನ್ಯಗಳನ್ನು ಕಾಣಿಕೆ ನೀಡುವಂತೆ ರಾಮಣ್ಣ ಬಡಿಗೇರ್ ಅವರು ಸ್ಪಷ್ಟವಾಗಿ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಕಳುಹಿಸಿದ್ದಾರೆ. ಬಡಿಗೇರ್ ಯಾವ ಆಧಾರದ ಮೇಲೆ ಹೇಳಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಈ ಬಗ್ಗೆ ತನಿಖೆ ನಡೆಸಿ ಸತ್ಯಾಂಶವನ್ನು ಹೊರತರಬೇಕೆಂದು ಸೈಬರ್ ಕ್ರೈಂ ಅಧಿಕಾರಿಗಳಲ್ಲಿ ಮನವಿ ಮಾಡಲಾಗುವುದು. ಅರ್ಚಕರ ಹಕ್ಕು ಕಸಿಯುವ ಮೂಲಕ ಕಾಳಿಕಾ ದೇವಿಯ ಪೂಜೆ ಮಾಡುವ ಅರ್ಚಕರನ್ನು ಬೀದಿಗೆ ನಿಲ್ಲಿಸಬೇಕು ಎಂಬ ಉದ್ದೇಶ ಇರವುದು ಮೇಲ್ನೋಟಕ್ಕೆ ಕಾಣುತ್ತದೆ. ಹಾಗಾಗಿ ತಪ್ಪಿತಸ್ಥರ ವಿರುದ್ಧ ಕಾನೂನು ಮೂಲಕ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ರವಾನಿಸಿದರು.