ಹುಬ್ಬಳ್ಳಿ : ಕೊರೊನಾ ಸೋಂಕಿನ ಭಯ ಕೈಗಾರಿಕೋದ್ಯಮಿಗಳನ್ನು ಹೈರಾಣಾಗಿಸಿದೆ. ಲಾಕ್ಡೌನ್ನಿಂದ ಸಣ್ಣ, ಮಧ್ಯಮ ಹಾಗೂ ದೊಡ್ಡ ಪ್ರಮಾಣದ ಕೈಗಾರಿಕೆಗಳು ಮೇಲಕ್ಕೆ ಎದ್ದೇಳಲು ಹರಸಾಹಸ ಮಾಡುತ್ತಿವೆ.
ಧಾರವಾಡ ಜಿಲ್ಲೆಯಲ್ಲಿ ಸುಮಾರು 20 ಸಾವಿರ ಸಣ್ಣ, ಮಧ್ಯಮ ಹಾಗೂ ದೊಡ್ಡ ಕೈಗಾರಿಕೆಗಳಿವೆ. ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಕಾರ್ಮಿಕರ ತೀವ್ರ ಕೊರತೆ ಎದುರಾಗಿದೆ. ಇದರಿಂದಾಗಿ ಕೈಗಾರಿಕಾ ಉತ್ಪಾದನೆ ಕುಂಠಿತಗೊಂಡಿವೆ.
ಹೊರ ರಾಜ್ಯಗಳ ಕಾರ್ಮಿಕರು ವಲಸೆ ಹೋಗಿದ್ದಾರೆ. ನುರಿತ ಕಾರ್ಮಿಕರು ತಮ್ಮ ಸ್ವಸ್ಥಾನಗಳಿಗೆ ತೆರಳಿದ್ದು, ಪರಿಣಾಮ ಕೈಗಾರಿಕೆಗಳಲ್ಲಿ ಮಾನವ ಸಂಪನ್ಮೂಲದ ತೀವ್ರ ಸಮಸ್ಯೆ ಎದುರಾಗಿದೆ.
ಸಣ್ಣ, ಮಧ್ಯಮ ಕೈಗಾರಿಕೆಗಳಲ್ಲಿ ಕಾರ್ಮಿಕರಿಗೆ ಪರ್ಯಾಯವಿಲ್ಲ. ಹೀಗಾಗಿ, ಕೊರೊನಾ ಎಫೆಕ್ಟ್ನಿಂದ ಶೇ.60ರಷ್ಟು ಸಣ್ಣ, ಮಧ್ಯಮ ಕೈಗಾರಿಕೆಗಳು ಲಾಕ್ಔಟ್ ಆಗಿವೆ. ಮೊದಲ ಅಲೆಯಿಂದ ಕೊಂಚ ಚೇತರಿಕೆಯತ್ತ ಕೈಗಾರಿಕೋದ್ಯಮ ಇತ್ತು.
ಆದ್ರೆ, ಎರಡನೇ ಅಲೆಯ ಹೊಡೆತ ಕೈಗಾರಿಕೆಗಳ ಮೇಲೆ ಭಾರೀ ಪೆಟ್ಟು ನೀಡಿದೆ. ನುರಿತ ಕಾರ್ಮಿಕರ ಕೊರತೆ ಎದುರಿಸುವಂತೆ ಮಾಡಿದೆ. ಬೃಹತ್ ಕೈಗಾರಿಕೆಗಳಲ್ಲಿ ರೊಬೋಟಿಕ್, ಆಟೋಮೇಷನ್ ಮತ್ತಿತರ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಕೈಗಾರಿಕೆಗಳನ್ನು ಮುನ್ನಡೆಸಲಾಗುತ್ತಿದೆ.
ಆದ್ರೂ ಕಚ್ಚಾ ವಸ್ತುಗಳ ಪೂರೈಕೆ ಹಾಗೂ ರಫ್ತು ಸಂಪೂರ್ಣ ಸ್ಥಗಿತಗೊಂಡಿದ್ದು ಕೈಗಾರಿಕೆಗಳನ್ನು ನಡೆಸದಂತ ಸ್ಥಿತಿ ಇದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದಡ್ ಈಟಿವಿ ಭಾರತಕ್ಕೆ ಮಾಹಿತಿ ಹಂಚಿಕೊಂಡಿದ್ದಾರೆ.
ದೊಡ್ಡ ಹಾಗೂ ಮಧ್ಯಮ ಕೈಗಾರಿಕೆಗಳು ಸಣ್ಣ ಕೈಗಾರಿಗಳನ್ನು ಅವಲಂಬಿಸಿದ್ದು, ಈಗ ಸಣ್ಣ ಕೈಗಾರಿಗಳು ಬಾಗಿಲು ಹಾಕಿವೆ. ದೊಡ್ಡ ಕೈಗಾರಿಗಳ ಸ್ಥಿತಿಯೂ ಡೋಲಾಯಮಾನವಾಗಿದೆ. ಸರ್ಕಾರ ಕೈಗಾರಿಕೆಗಳ ಪುನಶ್ಚೇತನಕ್ಕೆ ಹೊಸ ಪ್ಯಾಕೇಜ್ ಘೋಷಣೆ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.