ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ದೇಶದಾದ್ಯಂತ ಹೆಚ್ಚುತ್ತಲೇ ಇದೆ. ವೈರಸ್ ತಗುಲಿದವರನ್ನು ಪತ್ತೆ ಹಚ್ಚಲು ವೈದ್ಯಕೀಯ ಸಿಬ್ಬಂದಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಈ ಹಿನ್ನೆಲೆ ಸೋಂಕು ಪತ್ತೆ ಮಾಡಲು ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಗಂಟಲು ದ್ರವ ಸಂಗ್ರಹಿಸಲು ನೂತನ ಕ್ಯುಬಿಕಲ್ ಬಾಕ್ಸ್ ಇಡಲಾಗಿದೆ.
ಈ ಮೂಲಕ ವೈದ್ಯಕೀಯ ಸಿಬ್ಬಂದಿ ವ್ಯಕ್ತಿಯ ನೇರ ಸಂಪರ್ಕಕ್ಕೆ ಒಳಗಾಗದೆ ಪಾರದರ್ಶಕವಾಗಿಯೇ ಗಂಟಲು ದ್ರವವನ್ನು ಈ ಫೋನ್ ಬೂತ್ ಸಹಾಯದಿಂದ ಪಡೆಯಬಹುದು. ಚೌಕಾಕಾರದ ಕ್ಯುಬಿಕಲ್ ಮೂಲಕ ವೈದ್ಯಕೀಯ ಸಿಬ್ಬಂದಿ ಕೈ ಚೀಲಗಳನ್ನು ಧರಿಸಿ ವ್ಯಕ್ತಿಯ ಗಂಟಲು ದ್ರವ ಸಂಗ್ರಹಿಸಬಹುದು. ಅಲ್ಲದೆ ಇದರಿಂದ ಸೋಂಕಿತ ವ್ಯಕ್ತಿಯಿಂದ ವೈರಸ್ ಹರಡುವುದನ್ನು ತಡೆಗಟ್ಟಬಹುದು.
ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್ಗಳ ಕೊರತೆಯುಂಟಾಗಿ ದೇಶದ ನಾನಾ ಭಾಗದಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ವರದಿಯಾಗಿದೆ. ಈ ಹಿನ್ನೆಲೆ ಅಂತವರ ಸುರಕ್ಷತೆಯ ದೃಷ್ಟಿಯಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದೆ.
ಇನ್ನು ಪ್ರತಿ ವ್ಯಕ್ತಿಯ ಪರೀಕ್ಷೆಯ ಬಳಿಕ ಈ ಕ್ಯೂಬಿಕಲ್ ಸ್ವಚ್ಛಗೊಳಿಸಲಾಗುತ್ತದೆ ಹಾಗೂ ಕೈ ಚೀಲಗಳನ್ನು ಬದಲಿಸಲಾಗುತ್ತದೆ. ಇದರಿಂದ ಸೋಂಕು ತಡೆಗೆ ಸಹಾಯಕವಾಗಲಿದೆ.