ಹುಬ್ಬಳ್ಳಿ: ಬೀದಿಗಳಲ್ಲಿ ಓಡಾಡುವ ಸಾರ್ವಜನಿಕರು, ವಿದ್ಯಾರ್ಥಿಗಳು ಮೇಲೆ ದಾಳಿ ನಡೆಸಿ ಗಾಯಗೊಳಿಸುತ್ತಿದ್ದ ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲು ಹು-ಧಾ ಮಹಾನಗರ ಪಾಲಿಕೆ ಮುಂದಾಗಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆಯಿಟ್ಟಿದೆ.
ನಾಯಿಗಳನ್ನು ಹಿಡಿದು ಸ್ಥಳಾಂತರಿಸುವಂತೆ ಬೀದಿನಾಯಿಗಳ ಹಾವಳಿಗೆ ರೋಸಿ ಹೋಗಿದ್ದ ಸಾರ್ವಜನಿಕರಿಂದ ಪಾಲಿಕೆ ಕಂಟ್ರೋಲ್ ರೂಂಗೆ ನಿತ್ಯ ನೂರಾರು ಕರೆಗಳು ಬರುತ್ತಿವೆ. ಹೀಗೆ ಬಂದ ಕರೆಗಳ ಮಾಹಿತಿ ಪಾಲಿಕೆ ಸಿಬ್ಬಂದಿ ಸಂಗ್ರಹಿಸಿ, ನಾಯಿಗಳ ಕಾರ್ಯಾಚರಣೆ ನಡೆಸುವ ತಂಡಕ್ಕೆ ನೀಡುತ್ತಿದೆ. ಈ ತಂಡ ಪ್ರತಿದಿನ ಆದ್ಯತೆ ಆಧಾರದ ಮೇಲೆ 20-30 ನಾಯಿಗಳನ್ನು ಹಿಡಿದು ನಗರದ ಹೊರವಲಯದ ಇಟ್ಟಿಗಟ್ಟಿಯಲ್ಲಿ ನಾಯಿಗಳಿಗಾಗಿ ನಿರ್ಮಿಸಿರುವ ಆಪರೇಷನ್ ಥಿಯೇಟರ್ ಮತ್ತು ಗಾರ್ಡನ್ಗೆ ತಂದು ಬಿಡುತ್ತಿದೆ.
ಒಂದು ನಾಯಿಗೆ ಸಾವಿರಾರು ರೂಪಾಯಿ ಖರ್ಚು: ಒಂದು ನಾಯಿಯ ಶಸ್ತ್ರಚಿಕಿತ್ಸೆಗೆ ₹980 ಖರ್ಚು ಮಾಡುತ್ತಿದೆ. ಜೊತೆಗೆ ಆರೈಕೆ ಕೆಲಸ ಮಾಡಬೇಕಾಗುತ್ತದೆ. ಅದಕ್ಕಾಗಿ ಬೆಂಗಳೂರು ಮೂಲದ ಎನ್ಜಿಒಗೆ ಟೆಂಡರ್ ನೀಡಲಾಗಿದೆ. ಈ ಎನ್ಜಿಒ ಸಂಸ್ಥೆಯು ಆ್ಯಂಟಿ ರೇಬಿಸ್ ಚುಚ್ಚು ಮದ್ದು ನೀಡುವುದಲ್ಲದೆ, ಸಂತಾನಹರಣ ಚಿಕಿತ್ಸೆಗೆ ಒಳಗಾದ ನಾಯಿಗಳ ಗುರುತು ಪತ್ತೆಗಾಗಿ ಬಲಗಿವಿಯನ್ನು ಅರ್ಧಚಂದ್ರಾಕೃತಿಯಲ್ಲಿ ಕತ್ತರಿಸಿ ಬಿಡಲಾಗುತ್ತದೆ. ಇವೆಲ್ಲವೂ ಮಹಾನಗರ ಪಾಲಿಕೆ ಪಶು ವೈದ್ಯಾಧಿಕಾರಿಗಳ ಸಲಹೆಯಂತೆ ಕಾರ್ಯನಿರ್ವಹಿಸಲಾಗುತ್ತದೆ.
ಇದನ್ನೂ ಓದಿ...ಬೀದಿ ನಾಯಿಗಳ ಹಾವಳಿ: ಶ್ವಾನಗಳ ಸಂಖ್ಯೆ ಇಳಿಸಲು ಪಾಲಿಕೆ ಕ್ರಮ
ಸಾವಿರಾರು ನಾಯಿಗಳು: ವಾಣಿಜ್ಯ ನಗರಿಯಲ್ಲಿ ಬರೊಬ್ಬರಿ 18 ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿವೆ. ಬೀದಿಗಳಿಗಿಂತ ಹೆಚ್ಚಾಗಿ ಮುಖ್ಯರಸ್ತೆಗಳಲ್ಲೇ ನಾಯಿಗಳ ಹಾವಳಿ ಹೆಚ್ಚಾಗಿದ್ದು, ವಾಹನ ಸವಾರರು, ಪಾದಚಾರಿಗಳು ಸಂಚರಿಸುವುದಕ್ಕೆ ಪರದಾಡುವಂತಾಗಿದೆ. ಹೀಗಾಗಿ, ನಿತ್ಯ ನೂರಾರು ಕರೆಗಳು ಕಂಟ್ರೋಲ್ ರೂಂಗೆ ಬರುತ್ತವೆ. ಡಿಸೆಂಬರ್ ತಿಂಗಳಲ್ಲಿ 278 ದೂರು ಬಂದರೆ, ಜನವರಿಯಲ್ಲಿ 211 ದೂರು ಬಂದಿವೆ. ನಾಯಿ ಕೊಲ್ಲುವ ಅಧಿಕಾರವಿಲ್ಲ. ಹೀಗಾಗಿ, ನ್ಯಾಯಾಲಯದ ಆದೇಶದಂತೆ ಸಂತಾನಹರಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗುತ್ತಿದೆ ಎಂದು ಪಾಲಿಕೆ ಮುಖ್ಯ ಪಶುವೈದ್ಯಾಧಿಕಾರಿ ಹೇಳಿದರು.