ದಾವಣಗೆರೆ: 2001ರ ಜನಗಣತಿ ಪ್ರಕಾರ ಸರ್ಕಾರ 7.5 ಮೀಸಲಾತಿ ನೀಡಿದ ಬಳಿಕ 2021ರ ಜನಗಣತಿ ಪ್ರಕಾರ 8 ರಿಂದ 9.5 ರಷ್ಟು ಮೀಸಲಾತಿ ಪಡೆಯಲು ಹೋರಾಟ ಮಾಡ್ತೀವಿ ಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಶ್ರೀ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ಬಳಿಯ ವಾಲ್ಕೀಕಿ ಗುರು ಪೀಠದಲ್ಲಿ ಮಾತನಾಡಿದ ಅವರು, ಇದೇ ತಿಂಗಳ 8 ಹಾಗೂ 9ನೇ ತಾರೀಖಿನಂದು ನಡೆಯುವ ವಾಲ್ಮೀಕಿ ಜಾತ್ರೆಯಲ್ಲಿ 7.5 ಮೀಸಲಾತಿ ಹೆಚ್ಚಳ ಮಾಡ್ತಾರೆ ಎಂಬ ನಂಬಿಕೆ ಸಿಎಂ ಯಡಿಯೂರಪ್ಪನವರ ಮೇಲೆ ಇದೆ. ಒಂದು ವೇಳೆ ಮೀಸಲಾತಿ ಹೆಚ್ಚಿಸದಿದ್ದರೆ ಜಾತ್ರೆಯಲ್ಲಿ ಸೇರುವ ಜನರ ಅಭಿಪ್ರಾಯ ಸಂಗ್ರಹಿಸಿ ಮುಂದೆ ಏನ್ಮಾಡ್ಬೇಕು ಎಂಬುದಾಗಿ ಚರ್ಚಿಸುತ್ತೇನೆ ಎಂದು ಸ್ವಾಮೀಜಿ ತಿಳಿಸಿದರು.
ಮೀಸಲಾತಿ ಶೋಷಿತ ಸಮುದಾಯಗಳು ಬೆಳಕಿನೆಡೆ ಬರಲೆಂದು ಡಾ. ಅಂಬೇಡ್ಕರ್ರವರು ಸಾಂವಿಧಾನಿಕವಾಗಿ ನೀಡಿರುವ ಹಕ್ಕು. ಈ ಮೀಸಲಾತಿ ಬೇಡಿಕೆಗಳನ್ನು ಈಡೇರಿಸದೆ ಸರ್ಕಾರ ಗೊಂದಲ ಸೃಷ್ಟಿಸುತ್ತಿದೆ. ಸರ್ಕಾರ ಇಚ್ಛಾಶಕ್ತಿ ಪ್ರದರ್ಶನ ಮಾಡಿದ್ರೆ ಯಾರಲ್ಲೂ ಅಸಮಾಧಾನ ಮೂಡುತ್ತಿರಲಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವದು ಬೇಡ ಎಂದು ರಂಭಾಪುರೀ ಶ್ರೀಗಳ, 'ಎಲ್ಲ ಸ್ವಾಮೀಜಿಗಳು ಮೀಸಲಾತಿ ಕೇಳುತ್ತಿರುವುದು ರಾಜಕೀಯ ವ್ಯವಸ್ಥೆಯಲ್ಲಿ ಅರಾಜಕತೆ ಸೃಷ್ಟಿಸಿದಂತೆ' ಎಂಬ ಹೇಳಿಕೆಗೆ ಪ್ರಸನ್ನಾನಂದ ಪುರಿಶ್ರೀ ಟಾಂಗ್ ನೀಡಿದರು.