ದಾವಣಗೆರೆ: ವಾಯು ವಿಹಾರಕ್ಕೆ ಹೋಗುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡ ಖದೀಮರು ಬೈಕ್ನಲ್ಲಿ ಬಂದು ಕ್ಷಣ ಮಾತ್ರದಲ್ಲೇ ಮಹಿಳೆಯರ ಮಾಂಗಲ್ಯ ಸರ ಅಪಹರಿಸಿ ಪರಾರಿಯಾಗುತ್ತಿದ್ದಾರೆ. ಸರಗಳ್ಳರ ಹಾವಳಿಯಿಂದ ದಾವಣಗೆರೆಯಲ್ಲಿ ಮಹಿಳೆಯರು ಮನೆಯಿಂದ ಹೊರ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಆತಂಕ ಸೃಷ್ಟಿಸಿದೆ.
ದಾವಣಗೆರೆಯಲ್ಲಿ ದಿನೇ ದಿನೆ ಸರಗಳ್ಳತನ ಪ್ರಕರಣ ಹೆಚ್ಚುತ್ತಿದ್ದು, ಮಹಿಳೆಯರು ಒಂಟಿಯಾಗಿ ಧೈರ್ಯದಿಂದ ಒಡಾಡುವುದೇ ಕಷ್ಟವಾಗಿದೆ. ಬೆಳಿಗ್ಗೆ ಹಾಗೂ ಸಂಜೆ ವಾಯು ವಿಹಾರಕ್ಕೆ ಹೋಗುವ ಒಂಟಿ ಮಹಿಳೆಯರನ್ನೇ ಸರಗಳ್ಳರು ಟಾರ್ಗೆಟ್ ಮಾಡುತ್ತಿದ್ದಾರೆ. ಪಲ್ಸರ್ ಬೈಕ್ನಲ್ಲಿ ಬರುವ ಈ ಗ್ಯಾಂಗ್ ಹೆದ್ದಾರಿ ಪಕ್ಕದಲ್ಲಿ ವಾಕಿಂಗ್ ಮಾಡುವ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದೆ. ಕಳೆದ ಮೂರು ತಿಂಗಳಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ವಿದ್ಯಾನಗರ, ಆಂಜನೇಯ ಬಡಾವಣೆ, ಶಾಮನೂರು ಸೇರದಂತೆ ವಿವಿಧ ಬಡಾವಣೆಗಳಲ್ಲಿ ಎಂಟು ಜನ ಮಹಿಳೆಯರ ಮಾಂಗಲ್ಯ ಸರಗಳ್ಳತನವಾಗಿದ್ದು ಪೊಲೀಸರ ನಿದ್ದೆಗೆಡಿಸಿದೆ.
ನಗರದಲ್ಲಿ ದಿನದಿಂದ ದಿನಕ್ಕೆ ಸರಗಳ್ಳತನ ಪ್ರಕರಣ ಹೆಚ್ಚುತ್ತಿರುವುದರಿಂದ ಜಿಲ್ಲಾ ಪೊಲೀಸ್ ಇಲಾಖೆ ಹೆದ್ದಾರಿ ಪ್ರಾಧಿಕಾರಕ್ಕೆ ಪತ್ರ ಬರೆದಿದೆ. ಟೋಲ್ನಲ್ಲಿ ಸಂಚರಿಸುವ ಬೈಕ್ಗಳ ಮೇಲೆ ನಿಗಾ ಇಡುವುದರ ಜೊತೆಗೆ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಮನವಿ ಮಾಡಿದೆ.
ಇನ್ನು ಇತ್ತೀಚೆಗೆ ಪೊಲೀಸರು ಕೆಲ ಸರಗಳ್ಳರನ್ನು ಬಂಧಿಸಿದ್ದು, ಅವರೆಲ್ಲರು ಸ್ಥಳೀಯರೇ ಆಗಿದ್ದಾರೆ. ಆದರೆ ರಾಷ್ಟ್ರೀಯ ಹೆದ್ದಾರಿ ಮೂಲಕ ದಾವಣಗೆರೆ ಪ್ರವೇಶಿಸುವ ಇರಾನಿ ಗ್ಯಾಂಗ್ ಸರಗಳ್ಳತನ ಮಾಡಿ ರಾಷ್ಟ್ರೀಯ ಹೆದ್ದಾರಿ ಮೂಲಕ ಎಸ್ಕೇಪ್ ಆಗುತ್ತಿದ್ದು, ಈ ಗ್ಯಾಂಗ್ ಬಂಧಿಸಲು ಖಾಕಿ ಪಡೆ ಕಸರತ್ತು ನಡೆಸುತ್ತಿದೆ. ಆದರೆ ಅಲ್ಲಿಯ ತನಕ ಸ್ಮಾರ್ಟ್ ಸಿಟಿ ಮಹಿಳೆಯರು ಹುಷಾರಾಗಿರಿ ಎಂದು ದಾವಣಗೆರೆ ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.